ಕೂಗು ನಿಮ್ಮದು ಧ್ವನಿ ನಮ್ಮದು

ಕೊನೆಯ ಸತ್ಯ…..!

-ದೀಪಕ್ ಶಿಂಧೇ

ಹಸಿವು, ದಾಹ, ಹೊಟ್ಟೆ ಬಟ್ಟೆಗಳಷ್ಟೇ ನಿತ್ಯದ ಸತ್ಯವಿಲ್ಲಿ. ದ್ವೇಷ ಅಸೂಯೆ ರಾಗಗಳನ್ನೇ ಸೂಸುತ್ತಾರೆ ಎಲ್ಲ ಬಡವನಾಗಿದ್ದರೆ ನೀನು…

ಮನೆ ಎದುರು ನಾಯಿಗಳಿವೆ ಅನ್ನುವ ಬೋರ್ಡಿಗೆ ಬೆಲೆ ಇರುವ ಕಾಲವಿದು ಮಾಲೀಕ ಬಂದರೆ ಸೆಕ್ಯೂರಿಟಿ ಅವನದ್ದೂ ಈಗೀಗ ಗೊಡ್ಡು ಸಲಾಮು…

ಹಣವಷ್ಟೇ ಮಾತನಾಡುತ್ತದೆ ಗೆಳೆಯಾ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕಿಲ್ಲಿ. ದೈರ್ಯದ ಮಂತ್ರ ದಂಡವನ್ನೂ ಬಳಸಬೇಕು ಬಡತನವ ಮೆಟ್ಟಿ ನಿಲ್ಲುವದಕ್ಕೆ ಇಲ್ಲಿ.

ಒಳ್ಳೆಯದು ಮಾಡ ಹೊರಟವರಿಗೂ ಕಾಲೆಳೆವ ಕಾಲವಿದು. ಇರಲಿ ಎಚ್ಚರ ಗೆಳೆಯ ಹುಚ್ಚರ ಸಂತೆ ಇದು.

ಬೆನ್ನಿಗೆ ನಿಂತವರೇ ಇರಿಯುತ್ತಾರೆ ಆಗಾಗ.
ಒಡಹುಟ್ಟಿದವರಷ್ಟೇ ಅಲ್ಲ, ಮಡದಿ ಮಕ್ಕಳೂ ದೂರವಾಗುತ್ತಾರೆ. ಕಾಲ ನಗುತ ನಿಂತು ಕೈಯ್ಯ ಕೊಟ್ಟಾಗ.

ದುಡಿಮೆ ದುಡ್ಡಿನ ತಾಯಿ ನಿಜ.. ಧರ್ಮದ ಹಾದಿ ಬಲು ಕಷ್ಟ ಗೆಳೆಯ. ನಿಷ್ಟರಾಗುವ ನಾವು ನಿಷ್ಠೂರವೂ ಆಗುತ್ತೇವೆ. ಸೂಳೆಯರ ಸಂತೆಯಲ್ಲಿ ಗರತಿ ಬೆತ್ತಲೆ ಅಷ್ಟೇ..

ಇರಲಿ ಬಿಡು ಲೋಕದ ಹಾದಿ ಬೇರೆಯಾಗಿರಬಹುದು‌. ಬೆರೆತು ನಡೆಯುವ ಕಾಲ ದೂರವಾಗಿರಬಹುದು. ಆತ್ಮ ವಿಮರ್ಷೆಗೂ ಸಮಯ ಮೀರಿ ಹೋಗಿರಬಹುದು.

ಸತ್ಯ ಮರೆತಿದೆ ಲೋಕ ನೆನಪಿಸುವೆನಷ್ಟೇ.
ಗೋರಂಟಿ ಹಚ್ಚುವ ಕೈಗೂ ಗ್ಯಾರಂಟಿ ಇಲ್ಲದ ಕಾಲ. ಪುಣ್ಯ ಡೆಪಾಜಿಟ್ ಆದರೆ ಪಾಪ ಮಾಡಿದ ಸಾಲ.

ಅಂದವಿದೆಯೆಂದು ಬೀಗುವದು ಬೇಡ. ಆಸ್ತಿ ಇದೆಯೆಂದು ಮೆರೆಯುವದೂ ಬೇಡ. ಶಾಶ್ವತ ಯಾವುದೂ ಅಲ್ಲ. ಸತ್ಯ ಇದುವೇ ನೋಡ..

ಮಣ್ಣಾಗುವ ಮೈ, ಮಸಣ ಸೇರುವ ದೇಹ, ಹಾರೂವ ಬೂದಿಯಷ್ಟೇ.. ಅಂತ್ಯಕ್ರಿಯೆಗೆ ಬಂದವರ ನೋಡುವ ಭಾಗ್ಯವೂ ಇಲ್ಲ.. ಇದ್ದಾಗ ಎಲ್ಲರ ಬೆರೆತು ಸವಿಯಬೇಕಿದೆ ಬದುಕ.

ದ್ವೇಷ ಕಾರುವವರು ಕಾರುತಿರಲಿ‌ ಕಿಚ್ಚ ಹೊತ್ತಿಸುವ ಜನ ನೂರು ಸಾವಿರ ಬರಲಿ. ಒಲವ ಹಣತೆಯೊಂದು ಎದೆಯ ಗೂಡಿನಲ್ಲಿ ಉಸಿರು ಇರುವ ತನ ಉರಿಯುತಿರಲಿ..

error: Content is protected !!