ತುಮಕೂರು: ಪೆಟ್ರೋಲ್ ಬಂಕ್ನಲ್ಲಿ ಇಂಧನ ತುಂಬಿಸಿಕೊಳ್ಳುತ್ತಿದ್ದಾಗ ಅಗ್ನಿ ಅವಘಡ ಸಂಭವಿಸಿ 18 ವರ್ಷದ ಯುವತಿ ಮೃತಪಟ್ಟ ದಾರುಣ ಘಟನೆ ಬುಧವಾರ ತುಮಕೂರಿನಲ್ಲಿ ಸಂಭವಿಸಿದೆ. ಇದೀಗ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಬಹಿರಂಗವಾಗಿದ್ದು, ಹೃದಯ ಕಲಕುವಂತಿದೆ. ಮೊಬೈಲ್ ಫೋನ್ ಬಳಸುತ್ತಿದ್ದುದರಿಂದ ಬೆಂಕಿ ಹೊತ್ತಿಕೊಂಡಿತ್ತು ಎಂದು ಹೇಳಲಾಗುತ್ತಿದೆ. ಮೃತ ಯುವತಿಯನ್ನು ಭವ್ಯಾ ಎಂದು ಗುರುತಿಸಲಾಗಿದೆ. ಜತೆಗೆ ಆಕೆಯ ತಾಯಿ ರತ್ನಮ್ಮ ಕೂಡ ಇದ್ದರು. ಗಂಭೀರ ಗಾಯಗೊಂಡಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಭವ್ಯ ಹಾಗೂ ರತ್ನಮ್ಮ ಸಿರಾ ತಾಲೂಕಿನ ನಿವಾಸಿಗಳಾಗಿದ್ದಾರೆ.
ಪ್ಲಾಸ್ಟಿಕ್ ಕ್ಯಾನೊಂದರಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಹೋಗಲು ಇಬ್ಬರೂ ಬಂಕ್ಗೆ ಬಂದಿದ್ದರು. ಸಿಸಿಟಿವಿ ದೃಶ್ಯದಲ್ಲಿ ಕಾಣಿಸಿದ ಪ್ರಕಾರ, ರತ್ನಮ್ಮ ಅವರು ರತ್ನಮ್ಮ ಅವರು ದ್ವಿಚಕ್ರ ವಾಹನದಿಂದ ಇಳಿದು ಪ್ಲಾಸ್ಟಿಕ್ ಕ್ಯಾನ್ಗೆ ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದರು. ಇದೇ ವೇಳೆ ದ್ವಿಚಕ್ರ ವಾಹನದಲ್ಲಿ ಕುಳಿತ ಯುವತಿ ಮೊಬೈಲ್ ಫೋನ್ನಲ್ಲಿ ಮಗ್ನಳಾಗಿದ್ದರು. ದೀಢೀರ್ ಆಗಿ ಬೆಂಕಿ ಹೊತ್ತಿಕೊಂಡು ಧಗ್ಗನೆ ಆವರಿಸಿದೆ. ಸಿಬ್ಬಂದಿ, ರತ್ನಮ್ಮ ಹಾಗೂ ಇತರರು ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಭವ್ಯಾ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.