ಕೂಗು ನಿಮ್ಮದು ಧ್ವನಿ ನಮ್ಮದು

ದೇವದಾಸಿ ಪದ್ಧತಿಗೆ ದೂಡಲು ಯತ್ನಿಸಿದ ಪಾಲಕರು: ನೊಂದ ಯುವತಿಯಿಂದ ದೂರು

ರಾಯಚೂರು: ರಾಯಚೂರು ಜಿಲ್ಲೆಯ ಚಿಂಚೋಡಿ ಗ್ರಾಮದ 21 ವರ್ಷದ ಯುವತಿ, ತನ್ನನ್ನು ಬಲವಂತವಾಗಿ ದೇವದಾಸಿ ಪದ್ಧತಿಗೆ ದೂಡುತ್ತಿದ್ದಾರೆ ಎಂದು ಆರೋಪಿಸಿ, ಪಾಲಕರ ವಿರುದ್ಧವೇ ಜಾಲಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ. ಯುವತಿಯ ದೂರು ಆಧರಿಸಿ, ಡಿವೈಎಸ್‌ಪಿ ಎಸ್‌.ಎಸ್‌.ಹುಲ್ಲೂರು ನೇತೃತ್ವದಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.

ಯುವತಿಗೆ ಅಕ್ಕನ ಗಂಡನ (ಭಾವ) ಜತೆ ಮದುವೆ ಆಗಲು ಯುವತಿಯ ಪಾಲಕರು ಒತ್ತಡ ಹಾಕಿದ್ದಾರೆ. ಇದಕ್ಕೆ ಯುವತಿ ಬಲವಾಗಿ ವಿರೋಧ ವ್ಯಕ್ತಪಡಿಸಿದ್ದಾಳೆ. ಹೀಗಾಗಿ ನಾವು ಸೂಚಿಸಿದ ಮದುವೆಗೆ ನಿರಾಕರಿಸಿದರೆ ನಿನ್ನನ್ನು ದೇವದಾಸಿಯನ್ನಾಗಿ ಮಾಡುವುದಾಗಿ ಪಾಲಕರು ಯುವತಿಗೆ ವಿಚಿತ್ರ ಬೆದರಿಕೆ ಹಾಕಿದ್ದಾರೆ.

ಪಾಲಕರ ಒತ್ತಡಕೆ ಮನೆಯಿಂದ ತಪ್ಪಿಸಿಕೊಂಡು ಬಂದ ಯುವತಿ, ಯಾದಗಿರಿ ಜಿಲ್ಲೆ ಸುರಪುರ ಪಟ್ಟಣದ ತಮ್ಮ ಸಂಬಂಧಿಕರ ಮನೆಗೆ ತೆರಳಿ ಆಶ್ರಯ ಪಡೆದಿದ್ದಾಳೆ. ನಂತರ ತನ್ನ ಸಂಬಂಧಿಕರ ಮೂಲಕ ಅಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ದೂರು ನೀಡಿದ್ದಾಳೆ. ನಂತರ ಅಲ್ಲಿಂದ ದೇವದುರ್ಗದ ಮಹಿಳಾ ಪುನರ್ವಸತಿ ಕೇಂದ್ರಕ್ಕೆ ದೂರು ಹಸ್ತಾಂತರವಾಗಿದೆ.

ದೇವದಾಸಿ ಪದ್ಧತಿಗೆ ತನ್ನನ್ನು ನೂಕುತ್ತಿದ್ದಾರೆ ಎಂದು ಆರೋಪಿಸಿ, ಯುವತಿ ಠಾಣೆಗೆ ನೀಡಿದ ದೂರು ಆದರಿಸಿ 6 ಜನರ ವಿರುದ್ಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಶಾಂತಪ್ಪ, ಶಿವರಾಜ, ಮೌನೇಶ್, ದುರ್ಗಪ್ಪ, ಶಿವಪ್ಪ, ದುರ್ಗಮ್ಮ ವಿರುದ್ಧ ದೂರು ದಾಖಲಾಗಿದ್ದು, ಯುವತಿಗೆ ರಾಯಚೂರಿನ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.

error: Content is protected !!