ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಿಪ್ಪಾಣಿ ಮತ್ತು ರಾಯಭಾಗ ತಾಲ್ಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಹುಕ್ಕೇರಿ ತಾಲೂಕಿನ ಹಲವೆಡೆ ನದಿಗಳು ಉಕ್ಕಿ ಹರಿಯುತ್ತಿದ್ದು ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಪೂನಾ- ಬೆಂಗಳೂರು ರಾಜ್ಯ ಹೆದ್ದಾರಿಗೆ ವೇದಗಂಗಾ ನದಿಯ ನೀರು ನುಗ್ಗಿದ ಪರಿಣಾಮ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹೆದ್ದಾರಿಯಲ್ಲಿ ನದಿ ನೀರಿನ ಹರಿವಿನಿಂದಾಗಿ ಲಾರಿಯಲ್ಲಿ ಸಿಲುಕಿದ್ದ ತಮಿಳುನಾಡು ಮೂಲದ ಚಾಲಕನನ್ನು ನಿಪ್ಪಾಣಿ ಪೋಲಿಸರು ರಕ್ಷಣೆ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಈ ಘಟನೆ ಸಂಭವಿಸಿದ್ದು ನಿಪ್ಪಾಣಿ ತಾಲೂಕಿನ ಯಮಗರಣಿ ಗ್ರಾಮದಲ್ಲಿ ಘಟನೆ ನಡೆದಿದೆ.
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕೋಯ್ನಾ ಜಲಾಶಯದಿಂದ ಹತ್ತು ಸಾವಿರ ಕ್ಯೂಸೆಕ್ ನೀರನ್ನು ಹೊರ ಹರಿಸಲಾಗಿದ್ದು, ಒಂದು ಲಕ್ಷ ಹದಿಮೂರು ಸಾವಿರ ಕ್ಯೂಸೆಕ್ ನಷ್ಟು ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ರಾಯಭಾಗ ತಾಲ್ಲೂಕಿನ ಕುಡಚಿ ಉಗಾರ ಸೇತುವೆ ಜಲಾವೃತ ಆಗುವ ಮೂಲಕ ಬಾಗಲಕೋಟ ಜಿಲ್ಲೆಯ ಜಮಖಂಡಿ ಮತ್ತು ಮಹಾರಾಷ್ಟ್ರದ ಮೀರಜ್ ರಾಜ್ಯ ಹೆದ್ದಾರಿ ಬಂದ್ ಆಗಿದೆ.
ನಿಪ್ಪಾಣಿ ತಾಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ವೇದಗಂಗಾ ನದಿಯ ನೀರು ನುಗ್ಗಿದ ಪರಿಣಾಮ ದೇವಸ್ಥಾನ ಆಸ್ಪತ್ರೆ ಮನೆಗಳು ಜಲಾವೃತವಾಗಿ ಅಕ್ಷರಶಃ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ನೀರಿನಲ್ಲಿ ಸಿಲುಕಿದವರ ರಕ್ಷಣೆಗೆ ಜಿಲ್ಲಾಡಳಿತ ಹರಸಾಹಸ ನಡೆಸುವ ಸ್ಥಿತಿ ಎದುರಾಗಿದೆ. ನಿಪ್ಪಾಣಿ ತಾಲೂಕಿನ ಸೌಂದಲಗಾ, ಭೀವಸಿ, ಹುಣ್ಣರಗಿ, ಅಕ್ಕೋಳ, ಸಿದ್ನಾಳ, ಕುಣ್ಣೂರ, ಆಡಿ, ಕುರಲಿ, ಅಪ್ಪಾಚಿವಾಡಿ ಸೇರಿದಂತೆ ಹಲವು ಗ್ರಾಮಗಳ ಸಂಚಾರ ಸ್ಥಗಿತವಾಗಿದೆ. ಭೀವಸಿ, ಹುಣ್ಣರಗಿ, ಸಿದ್ನಾಳ ಗ್ರಾಮಗಳಿಗೆ ನೀರು ನುಗ್ಗಿದೆ.
ಇನ್ನೂ ಹಿರಣ್ಯಕೇಶಿ ನದಿ ಉಕ್ಕಿ ಹರಿಯುತ್ತಿರುವದರಿಂದಾಗಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನೀರು ನುಗ್ಗಿದೆ.ಸಂಕೇಶ್ವರ ಪಟ್ಟಣದ ಮಠ ಗಲ್ಲಿ ಸಂಪೂರ್ಣ ಜಲಾವೃತವಾಗಿದ್ದು ಐತಿಹಾಸಿಕ ಶಂಕರಲಿಂಗ ದೇವಸ್ಥಾನ ಮತ್ತು ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಹೊಳೆಮ್ಮ ದೇವಿ ದೇವಸ್ಥಾನಗಳು ಜಲಾವೃತವಾಗಿವೆ.ಸಂಕೇಶ್ವರ ಪಟ್ಟಣದ ಐವತ್ತಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ.
ಬೆಳಗಾವಿ ಜಿಲ್ಲೆಯ ನದಿ ತೀರದ ಗ್ರಾಮಗಳಲ್ಲಿ ಹೈ ಅಲರ್ಟ ಘೋಷಿಸಲಾಗಿದ್ದು ನಿಪ್ಪಾಣಿ, ಹುಕ್ಕೇರಿ, ಚಿಕ್ಕೋಡಿ, ರಾಯಭಾಗ, ಕಾಗವಾಡ ಮತ್ತು ಅಥಣಿ ತಾಲ್ಲೂಕಿನಲ್ಲಿ ಸದ್ಯ ಪ್ರವಾಹದ ಭೀತಿ ಎದುರಾಗಿದೆ