ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ಗೆ ಸಚಿವ ಸ್ಥಾನ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯೋಗಿಶ್ವರ್ ಅವರಿಗೆ ಸಚಿವ ಸ್ಥಾನ ಕೊಟ್ಟರೆ ನಾವಂತೂ ಸುಮ್ಮನಿರಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದ್ದಾರೆ. ಇನ್ನು ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕಗ್ಗಂಟ್ಟು ತೀವ್ರಗೊಳ್ಳುತ್ತಿದ್ದು ಇದರ ಮಧ್ಯೆ ಸಚಿವ ಸ್ಥಾನದ ಆಕಾಂಕ್ಷಿ ಸಿ.ಪಿ..ಯೋಗೇಶ್ವರ್ಗೆ ಮಂತ್ರಿ ಸ್ಥಾನ ನೀಡಲು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಬಳಗದಿಂದ ವಿರೋಧ ತೀವ್ರಗೊಂಡಿದೆ. ಮಂತ್ರಿ ಸ್ಥಾನಕ್ಕಾಗಿ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಭಾರಿ ಲಾಬಿ ನಡೆಸುತ್ತಿದ್ದಾರೆ.
ಬಿಜೆಪಿ ಹೈಕಮಾಂಡ್ ಮಟ್ಟದಲ್ಲೇ ಸಿ.ಪಿ. ಯೋಗೇಶ್ವರ್ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ಆ ಪ್ರಯತ್ನಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ವಲಯದ ವಿರೋಧವಿದೆ ಎನ್ನಲಾಗಿದೆ. ಇನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ನೀಡಿದ ಸಚಿವಾಕಾಂಕ್ಷಿಗಳ ಪಟ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೆಸರು ಇಲ್ಲ ಎನ್ನಲಾಗಿದೆ. ಆದರೆ ಸಿ.ಪಿ. ಯೋಗೇಶ್ವರ್ ಮಾತ್ರ ಹೈಕಮಾಂಡ್ ಮಟ್ಟದಲ್ಲಿ ಮಂತ್ರಿಗಿರಿಯ ಪ್ರಯತ್ನ ಮುಂದುವರಿಸಿದ್ದಾರೆ. ಈ ನಡುವೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿ, ರಾಮ್ ರಾಮ್ ಅಂತ ನಾನು ಒಬ್ಬರದ್ದೇ ಹೆಸರನ್ನು ಜಪ ಮಾಡುವುದಿಲ್ಲ. ಅವರ ಹೆಸರು ಕೂಡ ಹೇಳಲ್ಲ. ರಾಮ್ ರಾಮ್ ಅಂತಾ ಜಪ ಮಾಡಿದರೆ ಅವರು ರಾಮ ಆಗ್ತಾರೆ. ಹಾಗಾದಾಗ ನಾನು ರಾವಣ ಆಗಬೇಕಾಗುತ್ತದೆ. ಅವರಿಗೆ ಮಂತ್ರಿ ಸ್ಥಾನ ಕೊಟ್ಟರೆ ನಾವಂತೂ ಸುಮ್ಮನೆ ಇರಲ್ಲ ಎಂದು ಹೆಸರು ಹೇಳದೇ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೂ ಮೊದಲು ಸಿಎಂ ಬಿಎಸ್ವೈ ಅವರ ಕೆಲವು ಆಪ್ತರು ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಔಪಚಾರಿಕ ಸಭೆ ನಡೆಸಿ ಸಿ.ಪಿ.ಯೋಗೇಶ್ವರ್ಗೆ ಸಚಿವ ಸ್ಥಾನ ನೀಡಲು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಒಂದು ವೇಳೆ ಸಂಪುಟ ವಿಸ್ತರಣೆ ಆದರೆ ಹೈಕಮಾಂಡ್ ಏನು ನಿಲುವು ಕೈಗೊಳ್ಳಲಿದೆ ಎಂಬುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.