ತಮಿಳು ಸಿನಿಮಾ ರಂಗದ ಖ್ಯಾತ ನಟಿ ನಯನತಾರಾ ಮತ್ತು ವಿಘ್ನೇಶ್ ವಿವಾಹ ಇದೇ ಜೂನ್ 09ರಂದು ಚೆನ್ನೈನಲ್ಲಿ ನಡೆಯಲಿದೆ. ಖಾಸಗಿ ರೆಸಾರ್ಟ್ ವೊಂದು ಈ ಜೋಡಿಯ ಮದುವೆಗೆ ಸಿದ್ಧವಾಗುತ್ತಿದೆ. ಈಗಾಗಲೇ ನಯನತಾರಾ ಮತ್ತು ವಿಘ್ನೇಶ್ ಜೋಡಿಯು ಅಲ್ಲಿನ ಮುಖ್ಯಮಂತ್ರಿ ಸೇರಿದಂತೆ ಸಿನಿಮಾ ರಂಗದ ಅನೇಕ ಗಣ್ಯರಿಗೆ ಮದುವೆಗೆ ಆಹ್ವಾನಿಸಿದ್ದಾರೆ. ಅದೊಂದು ಅದ್ಧೂರಿ ಮದುವೆ ಆಗಿರುವುದರಿಂದ ಅದರ ವಿಡಿಯೋ ಹಕ್ಕುಗಳನ್ನು ಓಟಿಟಿಗೆ ಸೇಲ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಟಾರ್ ಮದುವೆಗಳು ವಾಹಿನಿಗಳಿಗೆ ಮತ್ತು ಓಟಿಟಿಗಳಿಗೆ ಮಾರಿಕೊಳ್ಳುವುದು ಸಾಮಾನ್ಯವಾಗಿದೆ. ಈ ಹಿಂದೆ ರಣ್ವೀರ್ ಕಪೂರ್ ಕೂಡ ಕೋಟ್ಯಾಂತರ ರೂಪಾಯಿಗೆ ತಮ್ಮ ಮದುವೆ ವಿಡಿಯೋವನ್ನು ಮಾರಿಕೊಂಡಿದ್ದರು. ಕನ್ನಡದಲ್ಲಿ ದಿಗಂತ್ ಕೂಡ ಹಾಗೆಯೇ ಮಾಡಿದ್ದರು. ಇದೀಗ ನಯನತಾರಾ ಕೂಡ ಕೋಟ್ಯಾಂತರ ರೂಪಾಯಿಗೆ ತಮ್ಮ ಮದುವೆ ವಿಡಿಯೋ ಹಕ್ಕನ್ನು ಮಾರಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪ್ರತಿಷ್ಠಿತ ಓಟಿಟಿ ವೇದಿಕೆ ಹಕ್ಕುಗಳನ್ನು ಪಡೆದಿದೆಯಂತೆ. ತಮಿಳು, ತೆಲುಗು, ಕನ್ನಡ, ಮಲೆಯಾಳಂ ಹಾಗೂ ಬಾಲಿವುಡ್ ಸಿನಿಮಾ ರಂಗದ ಅನೇಕ ಗಣ್ಯರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆಯಂತೆ.
ಆದರೆ, ಮದುವೆಗೆ ಕೆಲವೇ ಕೆಲವು ಜನರಿಗೆ ಆಮಂತ್ರಿಸಲಾಗಿದ್ದು, ಆರತಕ್ಷತೆಗೆ ಬಹುತೇಕ ಸಿನಿಮೋದ್ಯಮಿಗಳು ಭಾಗಿಯಾಗಲಿದ್ದಾರಂತೆ. ಕನ್ನಡದಲ್ಲಿ ನಯನತಾರಾ ಉಪೇಂದ್ರ ಅವರ ಜೊತೆ ಕೆಲಸ ಮಾಡಿದ್ದಾರೆ. ಹಾಗಾಗಿ ಉಪೇಂದ್ರ ಕೂಡ ಈ ಮದುವೆಯಲ್ಲಿ ಹಾಜರಿರಲಿದ್ದಾರೆ ಎನ್ನುವ ಮಾಹಿತಿ ಇದೆ. ಉಳಿದಂತೆ, ಕಮಲ್ ಹಾಸನ್, ರಜನೀಕಾಂತ್ ಸಮಂತಾ, ವಿಜಯ್ ಸೇತುಪತಿ, ಅನುಷ್ಕಾ ಶೆಟ್ಟಿ, ದಳಪತಿ ವಿಜಯ್ ಸೇರಿದಂತೆ ಸಾಕಷ್ಟು ಗಣ್ಯರಿಗೆ ಆಮಂತ್ರಣ ನೀಡಿಲಾಗಿದೆ. ಇನ್ನು ಮದುವೆಗೆ ಆಪ್ತರಿಗಷ್ಟೇ ಆಹ್ವಾನವಿದೆ.