ನವದೆಹಲಿ: ಉತ್ತರಾಖಂಡ್ ಆವೃತ್ತಿಯ ರೋಜಗಾರ್ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಸೋಮವಾರ ಚಾಲನೆ ನೀಡಿದ್ದಾರೆ. ಹೊಸದಾಗಿ ನೇಮಕಾತಿ ಮಾಡಿಕೊಳ್ಳಲಾಗಿರುವ 71 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗೆ ಇದೇ ಸಂದರ್ಭದಲ್ಲಿ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಇದೇ ಸಂದರ್ಭದಲ್ಲಿ ನವದೆಹಲಿಯಿಂದಲೇ ವಿಡಿಯೋ ಕಾನ್ಫೆರೆನ್ಸ್ ಮೂಲಕ ರೋಜ್ಗಾರ್ ಮೇಳ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಹಿಂದಿನ ಕೆಲ ತಿಂಗಳಲ್ಲಿ ಲಕ್ಷಾಂತರ ಯುವಕರಿಗೆ ಕೇಂದ್ರ ಸರ್ಕಾರದಿಂದ ಅಪಾಯಿಂಟ್ಮೆಂಟ್ ಲೆಟರ್ ನೀಡಲಾದ ಸಂಗತಿಯನ್ನು ತಿಳಿಸಿದರು.
ಪಹಾಡ್ ಕಾ ಪಾನಿ ಔರ್ ಪಹಾಡ್ ಕೀ ಜವಾನಿ ಪಹಾಡ್ ಕೇ ಕಾಮ್ ನಹೀ ಆತಿ (ಗುಡ್ಡದ ನೀರು, ಗುಡ್ಡದ ಯುವಕರು ಗುಡ್ಡದ ಕೆಲಸಕ್ಕೆ ಬರೋದಿಲ್ಲ) ಎಂಬ ಮಾತಿದೆ. ಈ ಧೋರಣೆಯನ್ನು ಬದಲಾಯಿಸಲು ಉತ್ತರಾಖಂಡ್ ಯುವಜನತೆ ಜೊತೆ ಕೇಂದ್ರ ಸರಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ನಮ್ಮ ಯುವ ಪೀಳಿತೆ ತಮ್ಮ ಹಳ್ಳಿಗಳಿಗೆ ಮರಳುವಂತಾಗಲು ಶ್ರಮಿಸಲಾಗುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಳೆದ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರೋಜ್ಗಾರ್ ಮೇಳವನ್ನು ಮೊದಲ ಬಾರಿಗೆ ಚಾಲನೆಗೆ ತಂದಿತು. 10 ಲಕ್ಷ ಮಂದಿಗೆ ಕೇಂದ್ರ ಸರ್ಕಾರದ ವತಿಯಿಂದ ಉದ್ಯೋಗಗಳನ್ನು ಕೊಡುವುದು ರೋಜ್ಗಾರ್ ಮೇಳದ ಉದ್ದೇಶ. ಈಗಾಗಲೇ ಗುಜರಾತ್, ಜಮ್ಮು ಕಾಶ್ಮೀರ ಮತ್ತು ಮಹಾರಾಷ್ಟ್ರ ಮೊದಲಾದ ಕೆಲ ರಾಜ್ಯಗಳಲ್ಲಿ ಉದ್ಯೋಗ ಮೇಳವನ್ನು ಉದ್ದೇಶಿಸಿ ಮೋದಿ ಈ ಹಿಂದೆ ಮಾತನಾಡಿದ್ದಾರೆ.
ಈ ಉದ್ಯೋಗ ಮೇಳದ ಮೂಲಕ ನೇಮಕಾತಿ ಮಾಡಿಕೊಳ್ಳಲಾದ ಜನರಿಗೆ ಆನ್ಲೈನ್ ತರಬೇತಿ ಶಿಕ್ಷಣ ನೀಡುವುದಕ್ಕಾಗಿ ಕರ್ಮಯೋಗಿ ಪ್ರಾರಂಭ್ ಎಂಬ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ. ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಚಿವಾಲಯದ ನಿರ್ದೇಶನದ ಮೇರೆಗೆ ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೊರೇಶನ್ ಸಂಸ್ಥೆ ಈ ನವನೇಮಕಾತಿಗಳಿಗೆ ಕೌಶಲ್ಯ ತರಬೇತಿಯ ವ್ಯವಸ್ಥೆ ಮಾಡಿದೆ.