ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸಕ್ಕೆ ಮೂರು ದಿನಗಳು ಬಾಕಿ ಇರುವಂತೆ ಪೊಲೀಸ್ ಇಲಾಖೆಯ ಆದೇಶವೊಂದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಜೊತೆಗೆ ಮೈಸೂರಿನ ಮೋದಿ ಕಾರ್ಯಕ್ರಮಕ್ಕೆ 2 ಡೋಸ್ ಸರ್ಟಿಫಿಕೇಟ್ ಸಾಕು. ಬೆಂಗಳೂರಿನ ಮೋದಿ ಕಾರ್ಯಕ್ರಮಕ್ಕೆ ಕೋವಿಡ್ ಟೆಸ್ಟ್ ಕಡ್ಡಾಯ ಎಂಬ ರೂಲ್ಸ್ ಗೊಂದಲ ಸೃಷ್ಟಿಸಿದೆ.
ಮೋದಿ ರಾಜ್ಯ ಪ್ರವಾಸ ಕೋವಿಡ್ ಪರೀಕ್ಷೆಯ ಗೊಂದಲ ತಂದಿಟ್ಟಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು, ಶಾಸಕರು, ಬಿಜೆಪಿ ಮುಖಂಡರು, ಸಾರ್ವಜನಿಕರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕೆಂಬ ಗೊಂದಲ ಉಂಟಾಗಿದೆ.
ಪೊಲೀಸ್ ಇಲಾಖೆ ಪ್ರಧಾನಿ ಕಾರ್ಯಕ್ರಮದಲ್ಲಿ ಕರ್ತವ್ಯಕ್ಕೆ ಹಾಜರಾಗುವ ಅಧಿಕಾರಿ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಎಂಬ ಆದೇಶ ಮಾಡಿದೆ. ಅದೇ ಆದೇಶವನ್ನೂ ಮಾಧ್ಯಮದವರು ಪಾಲಿಸಬೇಕೆಂದು ವಾರ್ತಾ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.
ಮೋದಿ ಪ್ರವಾಸ ಮಾಹಿತಿ:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೂನ್ 20 ರಂದು ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ವಿಮಾನದಲ್ಲಿ ಸಂಜೆ 4.55 ಕ್ಕೆ ಮೈಸೂರು ತಲುಪಲಿದ್ದಾರೆ. ವಿಮಾನ ನಿಲ್ದಾಣದಿಂದ ನೇರವಾಗಿ ಮೈಸೂರು ಮಹಾರಾಜ ಕಾಲೇಜ್ ಮೈದಾನದಲ್ಲಿ ನಡೆಯಲಿರುವ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಜೊತೆ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 5 ಗಂಟೆಯಿಂದ 6.15 ರವರೆಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.
ಒಂದು ಕಾಲು ಗಂಟೆಯ ಸಂವಾದ ಮುಗಿಸಿ ಅಲ್ಲಿಂದ ನೇರವಾಗಿ ಚಾಮುಂಡಿ ಬೆಟ್ಟದ ಪಾದದ ಬಳಿಯ ಶ್ರೀ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. 7.15 ರವರೆಗೆ ಪ್ರಧಾನಿಗಳು ಮಠದಲ್ಲಿ ಇರಲಿದ್ದಾರೆ. ಮಠದಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡಿ ತಾಯಿಯ ದರ್ಶನ ಪಡೆಯಲಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ರಾತ್ರಿ 7.30 ಕ್ಕೆ ಸರಿಯಾಗಿ ಆಗಮಿಸಲಿರುವ ಪ್ರಧಾನಿ, 15 ನಿಮಿಷ ಬೆಟ್ಟದಲ್ಲಿ ಇರಲಿದ್ದಾರೆ. ತಾಯಿ ದರ್ಶನ ಮುಗಿಸಿ ರಾಯ್ಡಿಸನ್ ಹೋಟೆಲ್ ಗೆ ಬಂದು ವಾಸ್ತವ್ಯ ಹೂಡಲಿದ್ದಾರೆ. ಜೂನ್ 21 ರಂದು ಬೆಳಗ್ಗೆ 6.30 ಕ್ಕೆ ಮೈಸೂರು ಅರಮನೆಯಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 6.30ಕ್ಕೆ ಆರಂಭವಾಗುವ ಯೋಗ 7.45 ಕ್ಕೆ ಮುಕ್ತಾಯವಾಗಲಿದೆ. ಕಾರ್ಯಕ್ರಮದ ನಂತರ ಯದುವಂಶದ ಪ್ರಮೋದಾದೇವಿ ಒಡೆಯರ್, ಯದುವೀರ್ ಅವರನ್ನು ಅರಮನೆಯ ಹಿಂಭಾಗದಲ್ಲಿನ ರಾಜವಂಶಸ್ಥರ ಮನೆಯಲ್ಲೆ ಭೇಟಿಯಾಗುವ ಸಾಧ್ಯತೆ ಇದೆ. ನಂತರ ಅಲ್ಲಿಂದ ನೇರವಾಗಿ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ವಿಶೇಷ ವಿಮಾನದಲ್ಲಿ ಕೇರಳಕ್ಕೆ ತೆರಳಲಿದ್ದಾರೆ.
ಚಾಮುಂಡಿ ತಾಯಿ ದರ್ಶನ, ಸುತ್ತೂರು ಮಠಕ್ಕೆ ಭೇಟಿ ಹಾಗೂ ಯದುವಂಶದ ರಾಜವಂಶಸ್ಥರ ಜೊತೆ ಮಾತುಕತೆ ಮೋದಿ ಅವರ ಯೋಗ ಕಾರ್ಯಕ್ರಮ ಹಿನ್ನೆಲೆಯಲ್ಲಿನ ಪ್ರಮುಖ ಭೇಟಿಗಳಾಗಿವೆ.