ಕೂಗು ನಿಮ್ಮದು ಧ್ವನಿ ನಮ್ಮದು

ವಿಜಯೇಂದ್ರಗೆ ಶಾಕ್‌, ಮೇ 20ರಂದೇ ಸುಳಿವು ನೀಡಿದ್ದ ಪ್ರಧಾನಿ ಮೋದಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣಕ್ಕೆ ಮನ್ನಣೆ ನೀಡುವುದಿಲ್ಲ ಎಂಬುದನ್ನು ಮೇ 20ರಂದೇ ಸುಳಿವು ನೀಡಿದ್ದರು. ಆದರೆ ಇದು ಯಾವುದರ ಪರಿವೇ ಇಲ್ಲದೆ ರಾಜ್ಯ ನಾಯಕರು ಬಿಎಸ್‌ವೈ ಪುತ್ರನಿಗೆ ರಾಜಕೀಯ ಭವಿಷ್ಯ ಕಲ್ಪಿಸಲು ತೆರೆ ಮರೆಯ ಕಸರತ್ತನ್ನು ಮುಂದುವರಿಸಿದ್ದರು. ಮೇ 20ರಂದು ಜಯಪುರದಲ್ಲಿ ನಡೆದ ರಾಷ್ಟ್ರೀಯ ಬಿಜೆಪಿ ಪದಾಧಿಕಾರಿಗಳ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಪಕ್ಷ ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣಕ್ಕೆ ಸೊಪ್ಪು ಹಾಕುವುದಿಲ್ಲ ಎಂದು ಗುಡುಗಿದ್ದರು.

ಪ್ರಧಾನಿ ಮೋದಿ ಅವರ ಭಾಷಣದ ಸೂಕ್ಷ್ಮತೆಯನ್ನು ಅರಿತಿದ್ದ ಬೆರಳೆಣಿಕೆಯಷ್ಟು ಬಿಜೆಪಿ ನಾಯಕರಿಗೆ ಪರಿಷತ್‌ ಟಿಕೆಟ್‌ ಪಟ್ಟಿ ಹೇಗಿರಲಿದೆ ಎಂಬ ಸುಳಿವು ದೊರಕಿತ್ತು. ಕೊನೆಗೂ ಪ್ರಧಾನಿ ಮೋದಿ ಅವರ ಆಶಯದಂತೆ ಪಟ್ಟಿ ಪ್ರಕಟವಾಗಿದೆ. ವಿಧಾನ ಪರಿಷತ್‌ಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್‌ ಘೋಷಿಸಿದೆ. ಪರಿಷತ್‌ ಪ್ರವೇಶ ಪಡೆದು ಸಂಪುಟದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕೆಂಬ ಬಿ.ವೈ.ವಿಜಯೇಂದ್ರ ಅವರಿಗೆ ಹೈಕಮಾಂಡ್‌ ನಿರಾಸೆ ಮೂಡಿಸಿದೆ. ಪುತ್ರನ ರಾಜಕೀಯ ಭವಿಷ್ಯ ರೂಪಿಸಲು ಹೊರಟಿರುವ ಮಾಜಿ ಸಿಎಂ ಯಡಿಯೂರಪ್ಪ ಅವರ ಆಶಯಕ್ಕೆ ಹೈಕಮಾಂಡ್‌ ತಣ್ಣೀರೆರಚಿದೆ. ವಿಜಯೇಂದ್ರಗೆ ಟಿಕೆಟ್‌ ದೊರಕಲಿದೆ ಎಂದೇ ಭಾವಿಸಿದ್ದ ಎಲ್ಲ ನಾಯಕರಿಗೆ ಹೈಕಮಾಂಡ್‌ ನಿರಾಸೆ ಮೂಡಿಸಿದೆ.

error: Content is protected !!