ಶಿವಮೊಗ್ಗ: ಬಿಸಿಲ ತಾಪಕ್ಕೆ ಪಂಚರತ್ನ ಯಾತ್ರೆ ಪಂಚರ್ ಆಗಿದೆ, ಪ್ರಜಾಧ್ವನಿ ಯಾತ್ರೆಗೆ ಬ್ರೇಕ್ ಫೇಲ್ಯೂರ್ ಆಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ಕುಮಾರ್ ಕಟೀಲ್ ವ್ಯಂಗ್ಯವಾಡಿದರು. ಇಲ್ಲಿನ ಎನ್ಇಎಸ್ ಮೈದಾನದಲ್ಲಿ ಭಾನುವಾರ ಜಿಲ್ಲಾ ಬಿಜೆಪಿಯಿಂದ ಆಯೋಜಿಸಿದ್ದ ನಗರಮಟ್ಟದ ಪೇಜ್ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವೂ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯರ ಮನೆಯಲ್ಲಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಧ್ವನಿ ಇಲ್ಲ. ಹಾಗಾಗಿ ಪ್ರಜಾಧ್ವನಿ ಹಿಡಿದುಕೊಂಡು ಹೊರಟಿದ್ದಾರೆ.
ಕಾಂಗ್ರೆಸ್ನಲ್ಲಿ ಪೇಜ್ ಪ್ರಮುಖರಿರಲಿ ರಾಜ್ಯಮಟ್ಟದ ಕಾರ್ಯಕಾರಿಣಿಯೇ ಇಲ್ಲ, ಡಿ.ಕೆ.ಶಿವಕುಮಾರ್ ಅಧ್ಯಕ್ಷರಾದ ನಂತರ ರಾಜ್ಯದಲ್ಲಿ ಕಾರ್ಯಕಾರಿಣಿಯೇ ನಡೆದಿಲ್ಲ. ಅದನ್ನು ಮಾಡಲು ಹೋದರೆ ರಾಜ್ಯಮಟ್ಟದಲ್ಲಿರಲಿ, ಜಿಲ್ಲಾಮಟ್ಟದಲ್ಲೇ ಪಕ್ಷದಲ್ಲಿ ಒಡಕು ಮೂಡಲಿದೆ. ಬಿಜೆಪಿ ನಾಯಕರಂತೆ ಕಾಂಗ್ರೆಸ್ ನಾಯಕರು ಯಾವುದೇ ಕಾಂಗ್ರೆಸ್ ಕಾರ್ಯಕರ್ತನ ಮನೆಗೆ ಹೋಗಿ ಅವನೊಂದಿಗೆ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದರು.
ಶಿವಮೊಗ್ಗ ರಾಜ್ಯ ಬಿಜೆಪಿಯ ಶಕ್ತಿ ಕೇಂದ್ರ. ಬಿಜೆಪಿಗೆ ಶಕ್ತಿ ತುಂಬುವ ಜಿಲ್ಲೆ. ಪ್ರತಿ ಬೂತ್ಗಳಲ್ಲಿಯು ಗೆಲ್ಲುವ ಸಂಕಲ್ಪ ನಮ್ಮದಾಗಿರಬೇಕು. ಆಗ ಮಾತ್ರ ನಾವು ನಿಜವಾದ ಗೆಲುವು ಪಡೆದಂತೆ. ಶಿವಮೊಗ್ಗದಲ್ಲಿ ರಾಜ್ಯದ ಮೊದಲ ಪೇಜ್ ಪ್ರಮುಖರ ಸಮಾವೇಶ ಆರಂಭಗೊಂಡಿದೆ. ಇಲ್ಲಿಂದ ವಿಜಯ ಯಾತ್ರೆ ಆರಂಭವಾಗಿದೆ ಎಂದರು.
ಕಾಂಗ್ರೆಸ್ ಭಯೋತ್ಪಾದಕ ಪಕ್ಷ:
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋಹತ್ಯೆ ಮತಾಂತರ ಕಾನೂನು ವಾಪಸ್ ಪಡೆಯುತ್ತೆ. ಹಿಂದುಪರ ನಿಲ್ಲುವ ಆಯನೂರು ಮಂಜುನಾಥ್, ನಳೀನ್ಕುಮಾರ್ ಕಟೀಲ್, ಈಶ್ವರಪ್ಪ ಜೂಲಿಗೆ ಹೋಗ್ತಾರೆ. ಹಿಜಾಬ್ ಗಲಾಟೆ ನಡೆದಾಗ ಕಾಂಗ್ರೆಸ್ ನಾಯಕರು ಹಿಜಾಬ್ ಪರವಾಗಿ ಮಾತನಾಡಿದರು. ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟಗೊಂಡಾಗ ಡಿ.ಕೆ.ಶಿವಕುಮಾರ್ ಅವರಿಗೆ ಅದು ಭಯೋತ್ಪಾದಕತೆ ಅನಿಸಲಿಲ್ಲ. ಡಿ.ಕೆ.ಶಿವಕುಮಾರ್ ಬೆಳಗಾವಿ ಮತ್ತು ಮಂಗಳೂರಿನ ಕುಕ್ಕರ್ ಮೇಲೆ ಪ್ರೀತಿ ಇದೆ. ಚುನಾವಣೆ ಆರಂಭವಾಗುವ ಮುನ್ನ ಕಾಂಗ್ರೆಸ್ ಮೂರು ಭಾಗವಾಗುತ್ತೆ ಎಂದು ಭವಿಷ್ಯ ನುಡಿದರು.
ಮುಂದಿನ ಸಲ ಭರ್ಜರಿ ಗೆಲುವು-ಈಶ್ವರಪ್ಪ ವಿಶ್ವಾಸ:
ಪೇಜ್ ಪ್ರಮುಖರ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ರಾಜ್ಯದ 224 ಕ್ಷೇತ್ರದಲ್ಲಿ ಪೇಜ್ ಪ್ರಮುಖರ ಸಭೆ ನಡೆಯಲಿದೆ, 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಪೇಜ್ ಪ್ರಮುಖರು ಕಾರಣಕರ್ತರಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿ ಸಾಕಷ್ಟುಅಭಿವೃದ್ಧಿ ಆಗಿದೆ. ಪೇಜ್ ಪ್ರಮುಖರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಲುಪಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಸಂಘಟನೆ ಇರುವುದು ಬಿಜೆಪಿಯಲ್ಲಿ ಮಾತ್ರ , ಕಾಂಗ್ರೆಸ್ನವರು ಜನರನ್ನು ಸೇರಿಸುತ್ತಾರೆ. ಕಾರ್ಯಕ್ರಮ ಮುಗಿದ ನಂತರ ಅವರೆಲ್ಲ ಹೋಗುತ್ತಾರೆ, ಕಾರ್ಯಕ್ರಮಕ್ಕೆ ಬಂದ ಅನೇಕರು ಕಾಂಗ್ರೆಸ್ಗೆ ಮತ ಹಾಕಲ್ಲ ಎಂದು ವ್ಯಂಗ್ಯವಾಡಿದರು.
ಅಭಿವೃದ್ಧಿ ಸಂಘಟನೆ ಮತ್ತು ನೇತೃತ್ವ ನಮ್ಮ ಪಕ್ಷದ ವಿಶೇಷತೆಯಾಗಿದ್ದು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಅವರು ಸೋತಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮೀತ್ ಶಾ ನೇತೃತ್ವದಲ್ಲಿ ನಾವು ಅನೇಕ ಚುನಾವಣೆಗಳನ್ನು ಗೆದ್ದಿದ್ದೇವೆ. ಕಾಂಗ್ರೆಸ್ನ ನಾಯಕರಾದ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಪ್ರಧಾನಿ ಹಾಗೂ ಸಿಎಂ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಏಕೆಂದರೆ, ಅವರಿಗೆ ಅಭಿವೃದ್ಧಿ ಬಗ್ಗೆ ಮಾತನಾಡಲು ವಿಷಯವೇ ಇಲ್ಲ. ಕಳೆದ ಬಾರಿ ನನ್ನನ್ನ 46,107 ಮತಗಳಿಂದ ಗೆಲಿಸಿದ್ದೀರಿ, ಆಗ ಇನ್ನೂ ಪೇಜ್ ಪ್ರಮುಖ್ ಇನ್ನೂ ಪೂರ್ಣ ಪ್ರಮಾಣದಲ್ಲಿ ರಚನೆಗೊಂಡಿರಲಿಲ್ಲ. ಈ ಬಾರಿ ಪೇಜ್ ಪ್ರಮುಖ್ ಪೂರ್ಣ ಪ್ರಮಾಣದಲ್ಲಿ ರಚನೆಗೊಂಡಿದೆ. ಹಾಗಾಗಿ 50 ಸಾವಿರ ಮತದಲ್ಲಿ ಗೆಲ್ಲಿಸಿಕೊಡಬೇಕೆಂದು ಕೋರಿದರು.
ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ಉಪಾಧ್ಯಕ್ಷ ಭಾನುಪ್ರಕಾಶ್, ರಾಜ್ಯ ಬಿಜೆಪಿ ಕಾರ್ಯದರ್ಶಿ ಮೋಹನ್ ತೆಂಗಿನಕಾಯಿ, ಶಾಸಕ ಕೆ.ಬಿ.ಅಶೋಕ್ ನಾಯ್್ಕ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಡಿ.ಎಸ್.ಅರುಣ್, ಪ್ರಮುಖರಾದ ಆರ್.ಕೆ.ಸಿದ್ದರಾಮಣ್ಣ, ಕೆ.ಇ. ಕಾಂತೇಶ್, ಎಂ.ಬಿ.ಭಾನುಪ್ರಕಾಶ್, ಎಸ್.ಎಸ್. ಜ್ಯೋತಿಪ್ರಕಾಶ್, ದತ್ತಾತ್ರಿ, ಎಸ್.ಎನ್.ಚನ್ನಬಸಪ್ಪ, ಶಿವಕುಮಾರ್, ಲಕ್ಷ್ಮೇ ನಾಯಕ್ ಮತ್ತಿತರರು ಇದ್ದರು. ರಾಜ್ಯದಲ್ಲೇ ಮೊಟ್ಟಮೊದಲ ಪೇಜ್ ಪ್ರಮುಖರ ಸಮಾವೇಶ
ರಾಜ್ಯದಲ್ಲಿ ಶತಾಯಗತಾಯ ಕಾರ್ಯಕರ್ತರ ಪಡೆಯಿಂದ ಹೆಚ್ಚಿನ ಸ್ಥಾನ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ಪಕ್ಷ ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಶಿವಮೊಗ್ಗದಲ್ಲಿ ಪೇಜ್ ಪ್ರಮುಖರ ಸಮಾವೇಶ ನಡೆಸಿದೆ. ಚುನಾವಣೆ ಹಿನ್ನೆಲೆ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಿ, ಬಿಜೆಪಿಯ ಭದ್ರಕೋಟೆ ಮಲೆನಾಡಿನ ಶಿವಮೊಗ್ಗದಲ್ಲಿ ಚುನಾವಣಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶಿವಮೊಗ್ಗ ನಗರದ ಎನ್ಇಎಸ್ ಮೈದಾನದಲ್ಲಿ ನಡೆದ ಪೇಜ್ ಪ್ರಮುಖರ ಸಮಾವೇಶದಲ್ಲಿ ಸುಮಾರು 5000 ಪೇಜ್ ಪ್ರಮುಖರು ಭಾಗಿಯಾಗಿದ್ದರು.