ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನೆರಡು ದಿನವಷ್ಟೇ ಬಾಕಿ ಇದೆ. ಕಳೆದ ಎರಡು ದಿನಗಳಿಂದ ನಡೆಸುತ್ತಿದ್ದ ಅಂತಿಮ ಹಂತದ ತಾಲೀಮು ಮುಕ್ತಾಯವಾಗಿದೆ. ಅಶ್ವಪಡೆ, ಪೊಲೀಸ್ ಬ್ಯಾಂಡ್, ಕುಶಾಲತೋಪು ಹಾಗೂ ಕಲಾ ತಂಡಗಳು ಸಮೇತ ಇಂದು ತಾಲೀಮು ನಡೆಸಲಾಗಿದೆ. ಇದೇ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಮಾವುತರು ಮತ್ತು ಕಾವಾಡಿಗಳಿಗೆ ಉಪಹಾರ ವ್ಯವಸ್ಥೆ ಮಾಡಿ ಪ್ರತಿ ವರ್ಷದಂತೆ ಈ ಬಾರಿಯೂ ಕಾಳಜಿ ವ್ಯಕ್ತಪಡಿಸಿದ್ದಾರೆ. ಅರಮನೆಗೆ ಮಾತ್ರ ಸೀಮಿತವಾದ ಜಂಬೂಸವಾರಿಗೆ ಅಂತಿಮ ಹಂತದ ಸಿದ್ದತೆಗಳು ಪೂರ್ಣಗೊಂಡಿದೆ. ಈವತ್ತು ಗಜಪಡೆಗೆ ಅಂತಿಮ ಹಂತದ ತಾಲೀಮು ನಡೆಸಲಾಯಿತು.
ಮರದ ಅಂಬಾರಿ ಹೊತ್ತ ಅಭಿಮನ್ಯು ಕುಮ್ಕಿ ಆನೆಗಳಾದ ವಿಜಯ ಹಾಗೂ ಕಾವೇರಿ ಜೊತೆ 300 ಮೀಟರ್ ದೂರ ಸಾಗಿ ಫಿಟ್ ಎಂದು ನಿರೂಪಿಸಿದ್ದಾನೆ. ಗಣ್ಯ ವ್ಯಕ್ತಿಗಳು ನಿಲ್ಲುವ ವೇದಿಕೆಯಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಗಜಪಡೆಗೆ ಪುಷ್ಪಾರ್ಚನೆ ಸಲ್ಲಿಸಿದರು. ಗಜಪಡೆಗೆ ಅಶ್ವಪಡೆ, ಕಲಾ ತಂಡಗಳು, ಮಂಗಲ ವಾದ್ಯಗಳು, ನಾದಸ್ವರ, ಪೂಜಾಕುಣಿತ, ವೀರಗಾಸೆ, ಚೆಂಡೆಮೇಳ ತಂಡಗಳು ಸಾಥ್ ಕೊಟ್ಟಿವೆ. 30 ರಿಂದ 40 ನಿಮಿಷ ನಡೆಯುವ ಜಂಬೂಸವಾರಿಗೆ ಇಂದು ನಡೆದ ತಾಲೀಮು ನಿಗದಿತ ಸಮಯಕ್ಕೆ ಪೂರ್ಣಗೊಳಿಸಿದೆ. 750 ಕೆಜಿ ತೂಕ ಹೊತ್ತ ಅಭಿಮನ್ಯು ತನ್ನ ಕಾರ್ಯ ಯಶಸ್ವಿಯಾಗಿ ಪೂರೈಸಿದ್ದಾನೆ. ದಸರಾ ಮಹೋತ್ಸವಕ್ಕೆ ಗಜಪಡೆ ಜೊತೆ ಕಾಡಿನಿಂದ ನಾಡಿಗೆ ಬರುವ ಮಾವುತರು ಮತ್ತು ಕಾವಾಡಿಗರಿಗೆ ಉಪಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು. 2008 ರಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶೋಭಾ ಕರಂದ್ಲಾಜೆ, ಮಾವುತರು ಮತ್ತು ಕಾವಾಡಿಗರಿಗೆ ಔತಣ ಕೂಟ ನೀಡುವ ಮೂಲಕ ಕಾಳಜಿ ವಹಿಸಿದ್ರು.
12 ವರ್ಷವಾದ್ರೂ ಶೋಭಾ ಕರಂದ್ಲಾಜೆ ಇಂದಿಗೂ ಮಾವುತರು ಮತ್ತು ಕಾವಾಡಿಗಳ ಕುಟುಂಬಕ್ಕೆ ತಮ್ಮ ಗೌರವ ಸೂಚಿಸುತ್ತಾ ಕಾಳಜಿ ಪ್ರದರ್ಶಿಸುತ್ತಿದ್ದಾರೆ. ಇಂದೂ ಸಹ ಅರಮನೆ ಆವರಣದಲ್ಲಿ ತಂಗಿರುವ ಮಾವುತರು ಮಾತ್ತು ಕಾವಾಡಿಗರ ಕುಟುಂಬಕ್ಕೆ ಉಪಹಾರ ವ್ಯವಸ್ಥೆ ಏರ್ಪಡಿಸಿದ್ರು. ಖುದ್ದು ತಾವೇ ಒಬ್ಬಟ್ಟು, ದೋಸೆ, ಇಡ್ಲಿ ಬಡಿಸುವ ಮೂಲಕ ಸರಳತೆ ಪ್ರದರ್ಶಿಸಿದ್ರು. ಇದೇ ವೇಳೆ ಮಾತನಾಡಿ ಮಾವುತರು ಹಾಗೂ ಕಾವಾಡಿಗರ ಸಮಸ್ಯೆಗಳಿಗೆ ತಮ್ಮ ಸರ್ಕಾರ ಸ್ಪಂದಿಸಿದ ಬಗ್ಗೆ ತಮ್ಮ ಬೆನ್ನು ತಾವೇ ತಟ್ಟಿಕೊಂಡ್ರು. ಸರಳ ದಸರಾ ಮಹೋತ್ಸವದ ಅಂತಿಮ ಸಿದ್ದತೆಗಳು ಭರದಿಂದ ಸಾಗಿದೆ. ಅರಮನೆ ಆವರಣದಲ್ಲಿ ನಡೆಯುವ ಜಂಬೂ ಸವಾರಿಗೆ ಜಿಲ್ಲಾಡಳಿತ ಫೈನಲ್ ಟಚ್ ಕೊಟ್ಟಿದೆ. ಸೆಮಿಫೈನಲ್ ಮುಗಿದಿದೆ ಇನ್ನೇನಿದ್ರೂ ಅಕ್ಟೋಬರ್ 26 ರಂದು ನಡೆಯುವ ಫೈನಲ್ ಆಟ ಬಾಕಿ ಇದೆ.