ಪುಣೆ: ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ಅತಿ ಹೆಚ್ಚು ಉಗ್ರರನ್ನು ಕೊಲ್ಲಲಾಗಿದ್ದು, ಈಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತಿಹೆಚ್ಚು ಉಗ್ರರನ್ನು ಬಂಧಿಸಲಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಭಯೋತ್ಪಾದಕ ದಾಳಿಗಳ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಕಳೆದ 18.5 ವರ್ಷದ ಅವಧಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ಒಟ್ಟು 11,453 ಭಯೋತ್ಪಾದಕ ದಾಳಿ ನಡೆದಿದ್ದು, 5543 ಉಗ್ರರನ್ನು ಹತ್ಯೆಗೈದು 2310 ಉಗ್ರರನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಕೇಂದ್ರ ಗೃಹ ಸಚಿವಾಲಯದ ಜಮ್ಮು ಕಾಶ್ಮೀರ ವಿಭಾಗವು ನೀಡಿದ ಉತ್ತರದಲ್ಲಿ ಈ ಅಂಕಿ ಅಂಶಗಳಿವೆ. ಅದರ ಪ್ರಕಾರ, 2004ರಿಂದ 2013ರ ಯುಪಿಎ ಅವಧಿಯ 10 ವರ್ಷದ ಆಳ್ವಿಕೆಯಲ್ಲಿ ಜಮ್ಮು ಕಾಶ್ಮೀರದಲ್ಲಿ 9321 ಭಯೋತ್ಪಾದಕ ದಾಳಿ ನಡೆದಿದೆ. ಆ ವೇಳೆ 4005 ಉಗ್ರರನ್ನು ಕೊಂದು, 878 ಉಗ್ರರನ್ನು ಬಂಧಿಸಲಾಗಿದೆ. ನಂತರ 2014ರಿಂದ ಈವರೆಗೆ ಜಮ್ಮು ಕಾಶ್ಮೀರದಲ್ಲಿ 2132 ಭಯೋತ್ಪಾದಕ ದಾಳಿ ನಡೆದಿದ್ದು, 1538 ಉಗ್ರರನ್ನು ಕೊಂದು 1432 ಉಗ್ರರನ್ನು ಬಂಧಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯವು ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಮಾತ್ರ ಮಾಹಿತಿ ನೀಡಿದೆ. ದೇಶದ ಇತರೆಡೆ ಈ ಅವಧಿಯಲ್ಲಿ ನಡೆದ ಭಯೋತ್ಪಾದಕ ದಾಳಿಗಳ ಮಾಹಿತಿ ನೀಡಿಲ್ಲ. ಪಾಕಿಸ್ತಾನದ ಮೇಲೆ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದ ನಂತರ ಭಯೋತ್ಪಾದಕರ ಬೆನ್ನುಮೂಳೆ ಮುರಿದಂತಾಗಿದ್ದು, ಆನಂತರ ಹೆಚ್ಚು ಭಯೋತ್ಪಾದಕ ದಾಳಿಗಳು ನಡೆದಿಲ್ಲ ಎಂದು ಆರ್ಟಿಐ ಕಾರ್ಯಕರ್ತ ಪ್ರಫುಲ್ ಸರ್ದಾ ತಮಗೆ ದೊರೆತ ಅಂಕಿ ಅಂಶಗಳನ್ನು ವಿಶ್ಲೇಷಿಸಿದ್ದಾರೆ.
- ಜಮ್ಮು ಕಾಶ್ಮೀರದಲ್ಲಿ 18.5 ವರ್ಷಗಳಲ್ಲಿ 11,453 ಉಗ್ರ ದಾಳಿ
- 55,43 ಉಗ್ರಗಾಮಿಗಳ ಹತ್ಯೆ, 2310 ಭಯೋತ್ಪಾದಕರ ಬಂಧನ
- ಯುಪಿಎ ಅವಧಿಯಲ್ಲಿ 9321 ಉಗ್ರ ದಾಳಿ, 4005 ಉಗ್ರರ ಹತ್ಯೆ
- 10 ವರ್ಷಗಳ ಅವಧಿಯಲ್ಲಿ 878 ಉಗ್ರ ಬಂಧಿಸಿದ್ದ ಯುಪಿಎ
- 2014ರಿಂದ ಈವರೆಗೆ 2132 ಉಗ್ರ ದಾಳಿ, 1538 ಉಗ್ರರ ಹತ್ಯೆ
- 1432 ಉಗ್ರಗಾಮಿಗಳ ಬಂಧನ: ಆರ್ಟಿಐನಡಿ ಮಾಹಿತಿ ಲಭ್ಯ