ಬೆಂಗಳೂರು: ಪದೇ ಪದೇ ತಮ್ಮ ಪಕ್ಷದ ಮೇರು ನಾಯಕ ಹೆಚ್ಡಿ ಕುಮಾರಸ್ವಾಮಿ ಬಗ್ಗೆ ಕಾಲ್ಕೆರೆದುಕೊಂಡು ಜಗಳಕ್ಕೆ ಬರುತ್ತಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಪಾಷಾಗೆ ಖಡಕ್ ವಾರ್ನಿಂಗ್ ಕೊಡಲೆಂದೇ ಇಂದು ಜೆಡಿಎಸ್ ಮೇಲ್ಮನೆ ಸದಸ್ಯ ಟಿ ಎ ಶರವಣ ಸುದ್ದಿಗೋಷ್ಠಿ ನಡೆಸಿದರು. ನಿನ್ನೆ ಕುಮಾರಣ್ಣ, ಇಂದು ಸಿದ್ದರಾಮಣ್ಣ, ಮುಂದೆ ಯಾರಣ್ಣ? ಎಂದೇ ಶಾಸಕ ಜಮೀರ್ರನ್ನು ತಡವಿಕೊಂಡ ಟಿ ಎ ಶರವಣ, ನಮ್ಮ ಪಕ್ಷದಲ್ಲಿ ಇದ್ದಾಗ ಕುಮಾರಣ್ಣ ಕುಮಾರಣ್ಣ ಅಂತಾ ಸುತ್ತಾಡ್ತಾ ಇದ್ರಿ. ಇಂದು ಸಿದ್ದರಾಮಣ್ಣ ಸಿದ್ದರಾಮಣ್ಣ ಅಂತಾ ಮಾತಾಡ್ತಾ ಇದಾರೆ. ಮುಂದೆ ಯಾರಣ್ಣ? ಎಲ್ಲಿ ಪಲ್ಟಿ ಹೊಡೀತೀರೋ ನೋಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ನಾಯಕರು ಪಲ್ಟಿ ಹೊಡೀತಾರೆ ಅನ್ನುತ್ತಾರಲ್ಲ. ನೀವೇ ಪಲ್ಟಿ ಹೊಡೆದವರು. ಎಂಟು ಜನ ಶಾಸಕರನ್ನು ಕರೆದುಕೊಂಡು ಹೋಗಿ ಪಲ್ಟಿ ಹೊಡೆದವರು ನೀವು. ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದು ನೀವು. ನಾವು ನಿಮ್ಮ ತಂಟೆಗೆ ಬರಲ್ಲ, ಆದರೆ ನಮ್ಮ ಪಕ್ಷದ ಬಗ್ಗೆ ಮಾತಾಡಬೇಡಿ ಎಂದು ವಾರ್ನಿಂಗ್ ನೀಡಿದರು. ಇತ್ತೀಚಿನ ದಿನಗಳಲ್ಲಿ ನಮ್ಮ ನಾಯಕರಾದ ಕುಮಾರಸ್ವಾಮಿ ಬಗ್ಗೆ ಲಘುವಾಗಿ ಮಾತಾನಾಡುವುದು ಹೆಚ್ಚಾಗಿದೆ. ಜಮೀರ್ ಅಹಮದ್ ಪದೇ ಪದೇ ಎಚ್ಡಿಕೆ ಬಗ್ಗೆ ಅಪಪ್ರಚಾರ ಮಾಡ್ತಿದಾರೆ. ಇದನ್ನು ನಮ್ಮ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಖಂಡಿಸ್ತಾ ಇದಾರೆ. ಆದರೆ ಕುಮಾರಸ್ವಾಮಿ ಕಾರ್ಯಕರ್ತನ್ನು ತಡೆಯುತ್ತಿದ್ದಾರೆ. ಅವರು ಏನಾದರೂ ಮಾತಾಡಿಕೊಳ್ಳಲಿ, ನೀವು ಸುಮ್ಮನಿರಿ ಅನ್ನುತ್ತಿದ್ದಾರೆ ಕುಮಾರಣ್ಣ. ಆದರೂ ದೇವೇಗೌಡರ ಕುಟುಂಬದ ಬಗ್ಗೆ ಜಮೀರ್ ಮಾತಾಡುವುದು ನಿಲ್ಲಿಸಿಲ್ಲ ಎಂದು ಶರವಣ ಕಿಡಿಕಾರಿದರು.
ದರಿದ್ರ ನಾರಾಯಣ ರ್ಯಾಲಿ ಮಾಡುವ ಮೂಲಕ ನಿಮ್ಮನ್ನು ಅಧಿಕಾರಕ್ಕೆ ತಂದಿದ್ದು ದೇವೇಗೌಡರು. ಎರಡು ಬಾರಿ ಸೋತು ಮನೆಯಲ್ಲಿ ಇದ್ದ ನಿಮ್ಮನ್ನು ಅಧಿಕಾರಕ್ಕೆ ತಂದಿದ್ದು ದೇವೇಗೌಡರು. ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡಿ ಮಾತಾಡುವ ಮೂಲಕ ಸಮುದಾಯಕ್ಕೆ ಅವಮಾನ ಮಾಡ್ತಿದ್ದಾರೆ ಎಂದು ಜಮೀರ್ ವಿರುದ್ಧ ಶರವಣ ಹರಿಹಾಯ್ದರು.