ಕೂಗು ನಿಮ್ಮದು ಧ್ವನಿ ನಮ್ಮದು

ಶೀಘ್ರದಲ್ಲೇ ನವಲಗುಂದ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಮಲಪ್ರಭಾ ನದಿ ನೀರು ಸರಬರಾಜು ನವಲಗುಂದ ಶಾಸಕ ಶಂಕರ ಮುನೇನಕೊಪ್ಪ

ಧಾರವಾಡ: ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಕುಡಿಯುವ ನೀರಿನ ಯೋಜನೆಯಾದ “ಜಲಜೀವನ್ ಮಿಷನ್” ಯೋಜನೆಯಡಿ ದೇಶದ ಪ್ರತಿ ಮನೆ ಮನೆಗೂ ಕುಡಿಯುವ ನೀರು ಸರಬರಾಜು ಮಾಡುವ ಜಲಜೀವನ ಮಿಷನ್ ಯೋಜನೆಯಡಿ ನವಲಗುಂದ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಮಲಪ್ರಭಾ ನದಿ ನೀರು ಸರಬರಾಜು ಮಾಡುವ ಯೋಜನೆಗೆ ಈಗಾಗಲೇ ನವಲಗುಂದ ಕ್ಷೇತ್ರಕ್ಕೆ 115 ಕೋಟಿ ಬಿಡುಗಡೆಯಾಗಿದೆ ಎಂದು ನವಲಗುಂದ ಶಾಸಕ ಶಂಕರ ಮುನ್ನೆನಕೊಪ್ಪ ಹೇಳಿದರು.

ಇದಕ್ಕೆ ಪೂರಕವಾಗಿ ಇಂದು ನವಲಗುಂದ ತಾಲೂಕಿನ ಖನ್ನೂರು ಗ್ರಾಮದಲ್ಲಿ ಅಂದಾಜು ಮೊತ್ತ 48 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಕುಡಿಯುವ ನೀರಿನ ಪೈಪಲೈನ್ ಅಳವಡಿಸುವುದು ಮತ್ತು ಮನೆಗಳಿಗೆ ನಳಗಳ ಜೋಡಣೆ ಕಲ್ಪಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಗ್ರಾಮೀಣ ಭಾಗದಲ್ಲಿ ಪ್ರಸ್ತುತ ಇರುವ ಅಸಮರ್ಪಕ ಪ್ರಮಾಣದ ಕುಡಿಯುವ ನೀರಿನ ಸೌಲಭ್ಯವನ್ನು ಸರಿಪಡಿಸಿ, ಆ ಮೂಲಕ ಪ್ರತಿಯೊಂದು ಮನೆಗೂ ನಿಯಮಿತ ಮತ್ತು ನಿರಂತರವಾಗಿ ಗುಣಮಟ್ಟದಿಂದ ಕೂಡಿರುವ ನೀರಿನ ಸರಬರಾಜಿಗೆ ಸಂಬಂಧಿಸಿದಂತೆ, ಧೀರ್ಘಾವದಿ ಆಧಾರದಲ್ಲಿ ಗ್ರಾಮೀಣ ಸಮುದಾಯದ ಜೀವನೋಪಾಯದ ಮಟ್ಟವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಹಾಗೂ ಕೈಗೆಟಕುವ ವಿತರಣಾ ದರದಲ್ಲಿ ಸೇವೆಯನ್ನು ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದ ಅವರು, ನೀರಿನ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಈ ಯೋಜನೆ ಸಹಕಾರಿಯಾಗಲಿದ್ದು, ನನ್ನ ಕ್ಷೇತ್ರದ ಪ್ರತಿಮನೆಗೂ ಮಲಪ್ರಭಾ ನದಿ ನೀರು ಸರಬರಾಜು ಮಾಡಬೇಕೆನ್ನುವ ನನ್ನ ಕನಸು ನನಸಾಗಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಭಾಗಿತ್ವದ ಈ ಮಹತ್ವಾಕಾಂಕ್ಷಿ ಯೋಜನೆಯ ಮೂಲಕ ಪ್ರತಿಮನೆಗೂ ನೀರು ಸರಬರಾಜು ಮಾಡುವ ಯೋಜನೆಯನ್ನು ಜಾರಿಗೊಳಿಸಿದ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರಿಗೆ, ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ರವರಿಗೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಜಗದೀಶ ಶೆಟ್ಟರ ರವರಿಗೆ, ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಸನ್ಮಾನ್ಯ ಶ್ರೀ ಪ್ರಹ್ಲಾದ ಜೋಶಿ ರವರಿಗೆ ಹಾಗೂ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವರಾದ ಸನ್ಮಾನ್ಯ ಶ್ರೀ ಕೆ.ಎಸ್.ಈಶ್ವರಪ್ಪರವರಿಗೆ ವೈಯಕ್ತಿಕವಾಗಿ ಹಾಗೂ ನನ್ನ ಕ್ಷೇತ್ರದ ಜನತೆಯೆ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಗುರು-ಹಿರಿಯರು, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕಸ್ತೂರೆವ್ವ ರಾಯಪ್ಪನವರ ,ಉಪಾಧ್ಯಕ್ಷ ರಾಜಶೇಖರಗೌಡ ಪಾಟೀಲ, ಮುಖಂಡರಾದ ಸಿದ್ಧನಗೌಡ ಪಾಟೀಲ, ಎಸ್.ಬಿ.ದಾನಪ್ಪಗೌಡರ, ಸಿದ್ಧಣ್ಣ ಕಿಟಗೇರಿ, ಶೇಖಣ್ಣ ಕಡ್ಲಿ, ಹೂಗಾರ, ಎಪಿಎಂಸಿ ಸದಸ್ಯರಾದ ವಜ್ರಗೌಡರ, ಗ್ರಾ.ಪಂ.ಸದಸ್ಯರಾದ ಚಲವಾದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

error: Content is protected !!