ಮೈಸೂರು: ರಾಜ್ಯ ಸರ್ಕಾರದ ಬಹು ನಿರೀಕ್ಷಿತ ‘ಗೃಹ ಲಕ್ಷ್ಮಿ’ ಯೋಜನೆ ಜಾರಿ ಸಮಾರಂಭವನ್ನು ಯಶಸ್ವಿಯಾಗಿ ಆಯೋಜಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ ಮಾಡಿದರು.
ಯೋಜನೆ ಜಾರಿ ಸಂಬಂಧ ಸೋಮವಾರ ಖಾಸಗಿ ಹೋಟೆಲ್ ನಲ್ಲಿ ನಡೆದ ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ ಜಿಲ್ಲೆಯ ಸಚಿವರು, ಶಾಸಕರ ಸಭೆಯಲ್ಲಿ ಮಾತನಾಡಿದ ಸಚಿವರು, ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಪ್ರತಿ ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರಿಗೆ ಕನಿಷ್ಠ 7 ಮಂದಿ ಮಹಿಳೆಯರನ್ನು ಕರೆ ತರಲು ಸೂಚಿಸಲಾಗಿದ್ದು, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಯಾವುದಕ್ಕೂ ಕೊರತೆಯಾಗಬಾರದು ಎಂದರು.
ಸಮಾರಂಭದಲ್ಲಿ ಒಂದೂವರೆ ಲಕ್ಷ ಮಹಿಳೆಯರು ಸೇರಲಿದ್ದು, ನಾಲ್ಕು ಜಿಲ್ಲೆಗಳಿಂದ ಬರುವ ಮಹಿಳೆಯರಿಗೆ ಮಧ್ಯಾಹ್ನದ ಊಟೋಪಚಾರ, ನೀರು ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ ಕಡೆ ಗಮನ ಹರಿಸಬೇಕು ಎಂದು ಶಾಸಕರು ಹಾಗೂ ಮುಖಂಡರಲ್ಲಿ ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಸಿ. ಮಹದೇವಪ್ಪ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬೋಸರಾಜು, ಶಾಸಕರಾದ ತನ್ವೀರ್ ಸೇಠ್, ಪುಟ್ಟರಂಗ ಶೆಟ್ಟಿ, ರಮೇಶ್ ಬಾಬು ಬಂಡಿಸಿದ್ದೇಗೌಡ, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವ ನಾರಾಯಣ್, ದರ್ಶನ್ ಪುಟ್ಟಣ್ಣಯ್ಯ, ಮಂಥರ್ ಗೌಡ, ಗಣೇಶ್ ಪ್ರಸಾದ್, ಮಾಜಿ ಶಾಸಕರಾದ ಎಂ.ಕೆ
ಸೋಮಶೇಖರ್, ನರೇಂದ್ರ, ಸೇರಿದಂತೆ ಪಕ್ಷದ ಮುಖಂಡರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.