ಕೂಗು ನಿಮ್ಮದು ಧ್ವನಿ ನಮ್ಮದು

ಮಟ್ಕಾ ಅಡ್ಡೆ ಮೇಲೆ ಪ್ರತ್ಯೇಕ ದಾಳಿ: ಬೆಳಗಾವಿ ಪೊಲೀಸರಿಂದ ಮೂವರ ಬಂಧನ

ಬೆಳಗಾವಿ: ಬೆಳಗಾವಿ ಶಹಾಪುರ ಮತ್ತು ಖಡೆಬಜಾರ್ ಪೊಲೀಸರು ಮಟ್ಕಾ ಅಡ್ಡೆ ಮೇಲೆ ಪ್ರತ್ಯೇಕ ದಾಳಿ ನಡೆಸಿ ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಶಹಾಪುರ ಪೊಲೀಸ್ ಠಾಣೆ ಪಿಐ ರಾಘವೇಂದ್ರ ಹವಾಲ್ದಾರ ನೇತೃತ್ವದ ತಂಡವು ಬೆಳಗಾವಿ ನಗರದ ವಡಗಾವಿ ರೈತಗಲ್ಲಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಡೆಸುತ್ತಿದ್ದ ಮಟ್ಕಾ ಅಡ್ಡೆ ಮೇಲೆ ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.

ಅಶೋಕ ಅನಂತ ಸುತಾರ 52 ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 4,830 ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಇನ್ನು ಖಡೆಬಜಾರ್ ಪೊಲೀಸ್ ಠಾಣೆಯ ಪಿಐ ಡಿ.ಬಿ.ಶಿಂದೆ ಅವರ ನೇತೃತ್ವದಲ್ಲಿ ಬೆಳಗಾವಿ ನಗರದ ಕಡೂಲ್ಕರ ಗಲ್ಲಿಯ ಮಟ್ಕಾ ಅಡ್ಡೆ ಮೇಲೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಗೌರವ ಮಾಂಡೋಲ್ಕರ ಮತ್ತು ತುಷಾರ ರಣಸುಬೆ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 4,375 ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದು ಈ ಕುರಿತು ಖಡೆಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

error: Content is protected !!