ಇಂದೋರ್ನ ಟರ್ನಿಂಗ್ ಪಿಚ್ನಲ್ಲಿ ಟೀಂ ಇಂಡಿಯಾ ಮಕಾಡೆ ಮಲಗಿದೆ. ಎರಡೂವರೆ ದಿನಗಳ ಕಾಲ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಹೋಳ್ಕರ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ತಾನು ತೋಡಿದ ಹಳಕ್ಕೆ ತಾನೇ ಬಿದ್ದಿದೆ. ಟರ್ನಿಂಗ್ ಪಿಚ್ನ ಸಂಪೂರ್ಣ ಲಾಭ ಪಡೆದ ಆಸ್ಟ್ರೇಲಿಯಾದ ಸ್ಪಿನ್ ಬೌಲರ್ಗಳು ಟೀಂ ಇಂಡಿಯಾವನ್ನು ಅಲ್ಪ ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಇಂದೋರ್ನಲ್ಲಿ ಟೀಂ ಇಂಡಿಯಾ ಈ ದುಸ್ಥಿತಿಗೆ ತಲುಪುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
ಇಡೀ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ ಮತ್ತು ಕೆಎಸ್ ಭರತ್ ಪೆವಿಲಿಯನ್ಗೆ ಮರಳಲು ಪೈಪೋಟಿ ತೋರುತ್ತಿರುವಂತೆ ಕಾಣುತ್ತಿತ್ತು. ಬರಿ ಬ್ಯಾಟಿಂಗ್ ವೈಫಲ್ಯ ಮಾತ್ರವಲ್ಲ, ಬದಲಿಗೆ ಟೀಂ ಇಂಡಿಯಾದ ಸೋಲಿಗೆ ಇನ್ನು ಪ್ರಮುಖ 5 ಅಂಶಗಳು ಕಾರಣವಾಗಿವೆ. ಅದರ ಪೂರ್ಣ ವಿವರ ಇಲ್ಲಿದೆ.
ಟೀಂ ಇಂಡಿಯಾ ಸೋಲಿಗೆ ಐದು ಕಾರಣಗಳು
ನಾಯಕನ ಎಡವಟ್ಟು
ಆಸ್ಟ್ರೇಲಿಯ ವಿರುದ್ಧ ಇಂದೋರ್ ಟೆಸ್ಟ್ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ಟೀಂ ಇಂಡಿಯಾದ ಬ್ಯಾಟ್ಸ್ಮನ್ಗಳು ನಾಯಕನ ನಂಬಿಕೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಂದೋರ್ನ ವಿಕೆಟ್ ಹೇಗಿರಲಿದೆ? ಎಂಬುದನ್ನು ಭಾರತದ ಬ್ಯಾಟ್ಸ್ಮನ್ಗಳಿಗೆ ಊಹಿಸಲು ಸಾಧ್ಯವಾಗಲಿಲ್ಲ. ಇಂದೋರ್ ಟೆಸ್ಟ್ನಲ್ಲಿ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಿದ್ದರೆ, ಆಸ್ಟ್ರೇಲಿಯಾದ ಬ್ಯಾಟಿಂಗ್ ನೋಡಿದ ನಂತರ ತಮ್ಮ ಆಟದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಬಹುದಾಗಿತ್ತು. ಅಲ್ಲದೆ ಈ ಹಿಂದೆ ನಡೆದ ನಾಗ್ಪುರ ಮತ್ತು ದೆಹಲಿ ಟೆಸ್ಟ್ಗಳಲ್ಲಿ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡುವ ಮೂಲಕ ಗೆದ್ದಿತ್ತು.
ಕೈಕೊಟ್ಟ ಬ್ಯಾಟಿಂಗ್ ವಿಭಾಗ
ಇಂದೋರ್ ಟೆಸ್ಟ್ನಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ 109 ರನ್ಗಳಿಗೆ ಅಂತ್ಯಗೊಂಡಿತು. ಮೊದಲ ಇನಿಂಗ್ಸ್ನಲ್ಲಿ ಕಳಪೆ ಪ್ರದರ್ಶನ ನೀಡಿ ಟೀಂ ಇಂಡಿಯಾ ತನ್ನ ಸೋಲಿಗೆ ತಾನೇ ಅಡಿಪಾಯ ಹಾಕಿತು. ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್ನಲ್ಲಿ 22 ರನ್ ಗಳಿಸಿ ಟೀಂ ಇಂಡಿಯಾ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡಿದನ್ನು ಬಿಟ್ಟರೆ ಮತ್ತ್ಯಾರು ಅಬ್ಬರಿಸಲಿಲ್ಲ. ಮೊದಲ ಇನಿಂಗ್ಸ್ನಲ್ಲಿ ರೋಹಿತ್ ಶರ್ಮಾ 12, ಶುಭ್ಮನ್ ಗಿಲ್ 21, ಚೇತೇಶ್ವರ ಪೂಜಾರ 1, ರವೀಂದ್ರ ಜಡೇಜಾ 4, ಶ್ರೇಯಸ್ ಅಯ್ಯರ್ (0) ಮತ್ತು ಕೆಎಸ್ ಭರತ್ (17) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
ಜಡೇಜಾ ನೋಬಾಲ್
ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ನ ನಾಲ್ಕನೇ ಓವರ್ನ ಮೊದಲ ಎಸೆತದಲ್ಲಿ ರವೀಂದ್ರ ಜಡೇಜಾ ಅವರು ಆಸ್ಟ್ರೇಲಿಯಾದ ಅಪಾಯಕಾರಿ ಬ್ಯಾಟ್ಸ್ಮನ್ ಮಾರ್ನಸ್ ಲಬುಶೇನ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಆದರೆ ಅಂಪೈರ್ ನೋ ಬಾಲ್ ನೀಡಿದರು. ಒಂದು ವೇಳೆ ಈ ಎಸೆತ ನೋ ಬಾಲ್ ಆಗಿರದಿದ್ದರೆ, ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾದ ಸ್ಕೋರ್ 2 ವಿಕೆಟ್ಗೆ 14 ಆಗುತ್ತಿತ್ತು. ಆದರೆ ನೋ ಬಾಲ್ ಜೀವದಾನವನ್ನು ಸರಿಯಾಗಿ ಬಳಸಿಕೊಂಡ ಲಬುಶೇನ್, ಉಸ್ಮಾನ್ ಖವಾಜಾ ಅವರೊಂದಿಗೆ 96 ರನ್ ಜೊತೆಯಾಟ ನಡೆಸಿದರು. ಮೊದಲ ಇನಿಂಗ್ಸ್ನಲ್ಲಿ ಲಬುಶೇನ್ 31 ರನ್ ಮತ್ತು ಉಸ್ಮಾಮ್ ಖವಾಜಾ 60 ರನ್ ಗಳಿಸಿದರು. ಈ ರನ್ಗಳು ನಿರ್ಣಾಯಕವಾದವು.
ಅಶ್ವಿನ್ರನ್ನು ಸರಿಯಾಗಿ ಬಳಸಲಿಲ್ಲ
ಇಂದೋರ್ ಟೆಸ್ಟ್ನ ಎರಡನೇ ದಿನದಂದು ನಾಯಕ ರೋಹಿತ್ ಶರ್ಮಾ, ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೈಗೆ ಚೆಂಡನ್ನು ಹೆಚ್ಚಾಗಿ ನೀಡಲಿಲ್ಲ. ಎರಡನೇ ದಿನ, ಪೀಟರ್ ಹ್ಯಾಂಡ್ಸ್ಕಾಂಬ್ ಮತ್ತು ಕ್ಯಾಮೆರಾನ್ ಗ್ರೀನ್ ಕ್ರೀಸ್ನಲ್ಲಿರುವಾಗ ಅಶ್ವಿನ್ ಹೆಚ್ಚಾಗಿ ಬೌಲಿಂಗ್ ಮಾಡಲಿಲ್ಲ. ಇದನ್ನು ಬಳಸಿಕೊಂಡ ಹ್ಯಾಂಡ್ಸ್ಕಾಂಬ್ ಮತ್ತು ಗ್ರೀನ್ 40 ರನ್ಗಳ ನಿರ್ಣಾಯಕ ಜೊತೆಯಾಟವನ್ನು ನೀಡಿದರು. ಆದ್ದರಿಂದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ ಭಾರತಕ್ಕಿಂತ 88 ರನ್ಗಳ ಮುನ್ನಡೆ ಸಾಧಿಸಿತು. ಅಂತಿಮವಾಗಿ ಅಶ್ವಿನ್, ಹ್ಯಾಂಡ್ಸ್ಕಾಂಬ್ ಅವರನ್ನು ಔಟ್ ಮಾಡಿ ಭಾರತಕ್ಕೆ ಐದನೇ ಯಶಸ್ಸು ತಂದುಕೊಟ್ಟರಾದರೂ, ಅಷ್ಟರಲ್ಲಿ ಡ್ಯಾಮೆಜ್ ಆಗಿ ಹೋಗಿತ್ತು.
ಮೂರು ವಿಮರ್ಶೆಗಳು ವ್ಯರ್ಥ
ಈ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಡಿಆರ್ಎಸ್ ಬಗ್ಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ ಮೂರು ವಿಮರ್ಶೆಗಳನ್ನು ವ್ಯರ್ಥ ಮಾಡಿತು. ರವೀಂದ್ರ ಜಡೇಜಾ ಬೌಲಿಂಗ್ನಲ್ಲೇ ರೋಹಿತ್ ಶರ್ಮಾ ಎಲ್ಲ 3 ವಿಮರ್ಶೆಗಳನ್ನು ವ್ಯರ್ಥ ಮಾಡಿದರು. ಅಲ್ಲದೆ ಮಾರ್ನಸ್ ಲಬುಶೇನ್ ಔಟ್ ಬಗ್ಗೆ ವಿಮರ್ಶೆ ತೆಗೆದುಕೊಳ್ಳಲು ರೋಹಿತ್ ಹಿಂದೇಟು ಹಾಕಿದರು. ವಾಸ್ತವವಾಗಿ ಆ ಎಸೆತದಲ್ಲಿ ಲಬುಶೇನ್ ಔಟಾಗಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಇದರ ಲಾಭ ಪಡೆದ ಲಬುಶೇನ್, ಖವಾಜಾ ಜೊತೆ 96 ರನ್ ಜೊತೆಯಾಟ ನಡೆಸಿದರು.