ಬೆಂಗಳೂರು: ಮಾವಿನ ಹಣ್ಣಿನ ಹೆಸರು ಕೇಳಿದ್ರೇ ಸಾಕು ಎಂಥವರ ಬಾಯಲ್ಲೂ ನೀರು ಬರುತ್ತೆ. ಯಾವಾಗ ಬೇಸಿಗೆ ಬರುತ್ತೋ ಅಂತಾ ತುಂಬಾ ಜನ ಕಾಯತ್ತಾ ಇರ್ತಾರೆ. ಆದ್ರೆ ಈ ಬಾರಿ ಮಾವಿನ ಹಣ್ಣಿನ ರುಚಿ ಸವಿಬೇಕು ಅಂದ್ರೇ ಇನ್ನೂ ಸ್ಪಲ್ಪ ದಿನ ಕಾಯಲೇಬೇಕು. ಜೊತೆಗೆ ಮಾವು ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ. ಈ ಬಾರಿ ಮಾವಿನ ಹಣ್ಣಿನ ಮೇಲೆ ಪ್ರಕೃತಿ ಮುನಿಸಿಕೊಂಡಿದೆ. ನವೆಂಬರ್ ನಲ್ಲಾದ ಅಕಾಲಿಕ ಮಳೆಯಿಂದಾಗಿ ಈ ಭಾರಿ ಮಾವಿನ ಫಸಲು ಕೈಗೆ ಬರುವುದು ಕೊಂಚ ವಿಳಂಬವಾಗಿದೆ.
ಪ್ರತಿ ವರ್ಷ ಮಾರ್ಚ್ ಕೊನೆ ಏಪ್ರಿಲ್ ಪ್ರಥಮ ವಾರದಲ್ಲಿ ಮಾವಿನ ಹಣ್ಣಿನ ಮಾರುಕಟ್ಟೆಗೆ ಬರುತ್ತಿತ್ತು. ಆದ್ರೆ ಈ ಬಾರಿ ಏಪ್ರಿಲ್ಗೆ ಕೆಲವೇ ದಿನ ಬಾಕಿ ಇದ್ದರೂ ಮಾವು ಮಾರುಕಟ್ಟೆಗೆ ಬಂದಿಲ್ಲ. ಹಾಗಾಗಿ ಏಪ್ರಿಲ್ ಅಂತ್ಯಕ್ಕೆ ಮಾವು ಸವಿಯಲು ಸಿಗಬಹುದು. ಈ ಬಾರಿ ಕೇವಲ ಶೇಕಡಾ 40 ರಿಂದ 50ರಷ್ಟು ಇಳುವರಿ ಬರಬಹುದು ಅಂತಾ ಮಾವು ನಿಗಮದ ತಾಂತ್ರಿಕ ಸಮಿತಿ ಅಂದಾಜಿಸಿದೆ. ಈ ವರ್ಷ ಕರ್ನಾಟಕದಲ್ಲಿ ಕೇವಲ 8 ಲಕ್ಷ ಮೆಟ್ರಿಕ್ ಟನ್ ಮಾವು ಬರುವ ಅಂದಾಜಿದೆ. ಮೇ ತಿಂಗಳಲ್ಲಿ ಹೆಚ್ಚಿನ ಮಾವು ಬರಬಹುದು. ಮಾವಿನ ಇಳುವರಿ ಕಡಿಮೆಯಾಗುವುದರಿಂದ ಬೆಲೆ ಸಹ ಹೆಚ್ಚಾಗಲಿದೆ ಅಂತಾ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ಬಾರಿ ಹಣ್ಣುಗಳ ರಾಜನಿಗೆ ಫುಲ್ ಡಿಮ್ಯಾಂಡ್ ಹೆಚ್ಚಲಿದ್ದು, ಇದರ ಜೊತೆಗೆ ಗ್ರಾಹಕರು ಮಾವಿನ ಹಣ್ಣನ್ನು ಸವಿಯಲು ಹೆಚ್ಚಿನ ದುಡ್ಡು ತೆರಬೇಕಾಗಿದೆ.