ಬೆಂಗಳೂರು: ರಾಜ್ಯದ 3,247 ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಗುರುತಿಸಲಾಗಿದ್ದು, ಲಂಬಾಣಿ ತಾಂಡಾಗಳನ್ನೂ ಕಂದಾಯ ಗ್ರಾಮಗಳೆಂದು ಗುರುತಿಸಲಾಗಿದೆ ಎಂದು ವಿಧಾನಸೌಧದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ. ಇಂದು (ಅ. 17) ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು ಬರ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜಿಲ್ಲೆಗಳಲ್ಲಿನ ಸರ್ಕಾರಿ ಆಸ್ಪತ್ರೆಗಳ ಸ್ಥಿತಿಗತಿ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚರ್ಚೆಯಾಗಿದೆ. ಐಎಂಆರ್, ಎಂ.ಎಂ.ಆರ್ ಬಗ್ಗೆ ಸಭೆಯಲ್ಲಿ ಕಳವಳ ವ್ಯಕ್ತವಾಗಿದೆ. ಜಮೀನು ವಿಚಾರದಲ್ಲಿ ಬಗರ್ ಹುಕುಂ ಸಕ್ರಮಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಹೆಚ್ಚುವರಿ ಅಧಿಕಾರಿಗಳನ್ನು ನೇಮಿಸಿಕೊಂಡು ಕಂದಾಯ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು. ಕಂದಾಯ ಇಲಾಖೆಯ ಪೌತಿ, ಅಳತೆ, ಜಮೀನಿಗೆ ಹೋಗುವ ದಾರಿ ಕುರಿತು ಜನರಿಗೆ ಸ್ಪಂದಿಸುವ ಬಗ್ಗೆ ಅನುಕೂಲ ಮಾಡಿಕೊಡಲು ಸೂಚಿಸಲಾಗಿದೆ. ಸುಮೋಟೋ ಅಡಿಯಲ್ಲಿ ಕುಟುಂಬದ ಹಿರಿಯ ಸದಸ್ಯರು ಮೃತರಾದರೆ ಅವರ ಮನೆಯವರಿಗೆ ರಿಜಿಸ್ಟರ್ ಮಾಡಿಕೊಡಲು ಸೂಚಿಸಲಾಗಿದೆ ಎಂದು ಹೇಳಿದರು.
ಆಯುಷ್ಮಾನ್ ಕಾರ್ಡ್ಗಳನ್ನು ಪ್ರತಿ ಜಿಲ್ಲೆಯಲ್ಲಿ, ಪ್ರತಿ ತಿಂಗಳು ಇಂತಿಷ್ಟು ಕೊಡಬೇಕು ಎಂದು ಟಾರ್ಗೆಟ್ ನೀಡಲಾಗಿದೆ. ನಗರೋತ್ಥಾನ ಅಡಿಯಲ್ಲಿ ಮೂರೂವರೆ ಸಾವಿರ ಕೋಟಿ ನೀಡಲಾಗಿದ್ದು, ಮಾರ್ಚ್ 15ರೊಳಗೆ ಕೆಲಸ ಮುಗಿಸಲು ಸೂಚನೆ ನೀಡಲಾಗಿದೆ. ನೆರೆಯಿಂದ ಮನೆ ಕಳೆದುಕೊಂಡ ಮನೆಗಳನ್ನು ಗುರುತಿಸಿ ಎ, ಬಿ ಮತ್ತು ಸಿ ಕೆಟಗರಿಯಡಿ ಹಣ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಮನೆ ಪರಿಹಾರ ನೀಡಿದ ಮೇಲೂ ಮನೆ ಕಟ್ಟದೆ ಇರುವ ಮಾಲೀಕರನ್ನು ಗುರುತಿಸಿ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು. ಒಂದು ಬಾರಿ ಪರಿಹಾರ ಕೊಟ್ಟಿದ್ದರೆ ಮತ್ತೆ ಕೊಡಲು ಬರೋದಿಲ್ಲ ಎಂಬ ನಿಯಮ ಇತ್ತು, ಆದರೆ ಇದೀಗ ಮತ್ತೆ ಮಳೆಯಿಂದ ಡ್ಯಾಮೇಜ್ ಆಗಿದ್ದರೆ ಮತ್ತೆ ಬಿ ಮತ್ತು ಸಿ ಕೆಟಗರಿ ಅಡಿ ಎನ್ ಡಿಆರ್ ಎಫ್ ಮಾನದಂಡದ ಆಧಾರದ ಮೇಲೆ ಮತ್ತೆ ಹಣ ಬಿಡುಗಡೆ ಮಾಡಬಹುದು ಎಂದು ತಿಳಿಸಿದರು.
ಮಣ್ಣು ಸವಕಳಿಯಿಂದ ಹಾನಿಗೊಳಗಾದವರಿಗೂ ಪರಿಹಾರ ನೀಡಬೇಕು. ಪಿಎಂ ಸ್ವನಿಧಿ ಅಡಿ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿರುವವರಿಗೆ ಹಣ ಮಂಜೂರು ಮಾಡಲು ಸೂಚನೆ ನೀಡಲಾಗಿದೆ. ಡಿಸಿಗಳು ಜನರ ಸಮಸ್ಯೆ ಕೇಳಬೇಕು. ತಿಂಗಳಿನಲ್ಲಿ ಒಮ್ಮೆ ತಾಲ್ಲೂಕಿಗೆ ಭೇಟಿ ಮಾಡಬೇಕು. ತಾಲ್ಲೂಕು ಮಟ್ಟದ ಪ್ರಕರಣಗಳನ್ನು ಸ್ಥಳದಲ್ಲೇ ಮುಗಿಸಬೇಕು. ಮಳೆಯಿಂದ ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಲಾಗಿದ್ದು, ಅಭಿವೃದ್ಧಿ ಆಗಿರುವ ರಸ್ತೆಗಳು ಹಾಳಾಗಿದ್ದರೆ ಕನಿಷ್ಠ ಓಡಾಡಲು ಜಾಗ ಮಾಡಿಕೊಡಬೇಕು. ಹಳ್ಳಿಗಳಲ್ಲಿ ಸ್ಮಶಾನ ಇಲ್ಲದಿದ್ದರೇ ಸರ್ಕಾರದ ಅಥವಾ ಖಾಸಗಿ ಜಾಗ ಗುರುತಿಸಬೇಕು ಎಂದು ಸೂಚನೆ ನೀಡಲಾಗಿದೆ.
ಸಿಇಓಗಳ ಸಭೆಯಲ್ಲಿ ಜಲಜೀವನ್ ಮಿಷನ್ಗೆ ಹೆಚ್ಚು ಒತ್ತು
ಮನೆ ಮನೆಗೆ ಕೊಳಾಯಿ ನೀರು ಕೊಡಲು ನಿರ್ಧಾರ ಕೈಗೊಳ್ಳಲಾಗಿದ್ದು, 9 ಸಾವಿರ ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಕೆಲಸ ಮುಗಿಯಬೇಕು. ಟೆಂಟರ್ ಕರೆದು ನಿಗದಿತ ದಿನದಲ್ಲಿ ಮುಗಿಸಬೇಕು. ಮಳೆಯಿಂದಾಗಿ ಹೆಚ್ಚಾಗಿ ನರೇಗಾ ಕೆಲಸ ಆಗಿಲ್ಲ. ನಿಗದಿತ ದಿನದ ಕೆಲಸ ಮುಗಿಸಿ ಮತ್ತೆ ಕೇಂದ್ರದಿಂದ ಹೆಚ್ಚಿನ ಹಣ ಕೇಳಬೇಕು. ನರೇಗಾದಡಿ ಚರಂಡಿ ಮತ್ತು ಶಾಲೆ ಕಟ್ಟಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಅಂಗನವಾಡಿ ಕಟ್ಟಲು 5 ಲಕ್ಷ ಇದ್ದ ಅಂದಾಜು ವೆಚ್ಚವನ್ನು 8 ಲಕ್ಷಕ್ಕೆ ಏರಿಸಲಾಗಿದೆ. ಪಂಚಾಯತಿ ಕ್ಲಸ್ಟರ್ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಘನತ್ಯಾಜ್ಯ ನಿರ್ವಹಣೆಗೆ 15 ಸಾವಿರ ಹಳ್ಳಿಗಳಲ್ಲಿ ಡಿಪಿಆರ್ ಆಗಿದ್ದು, ಅಮೃತ ಗ್ರಾಮ ಪಂಚಾಯತ್ ಅಡಿ ತಾಲ್ಲೂಕಿನಲ್ಲಿ 5-6 ಗ್ರಾಮಗಳನ್ನು ಗುರುತಿಸಲಾಗಿದೆ.
ಸಿಎಂ ವಿಶೇಷ ಅನುದಾನ ಅಡಿ ವ್ಯಾಪಕ ಹಣ ಖರ್ಚು ಆಗಬೇಕಿದೆ. ಕೃಷಿ, ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಉಪಕರಣ ನೀಡಲು ಆನ್ಲೈನ್ ಮೂಲಕ ಅರ್ಜಿ ಹಾಕಬೇಕು. ಆನ್ಲೈನ್ ಅರ್ಜಿ ವಿಧಾನವನ್ನೀಗ ಸರಳೀಕರಿಸಿ ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ಅರ್ಜಿ ಪಡೆಯಲು ತೀರ್ಮಾನ ಕೈಗೊಳ್ಳಲಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಕ್ರೆಡಿಟ್ ಲೋನ್ ನೀಡಲು ಬ್ಯಾಂಕ್ ಜೊತೆ ಸಭೆ ನಡೆಸಿ ರೈತರಿಗೆ ಸಮರ್ಪಕ ಸಾಲ ಕೊಡಲು ಸೂಚನೆ ನೀಡಲಾಗಿದೆ. ಸಣ್ಣ ಮಳೆಗೂ ನೆರೆ ಹಾವಳಿ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಉಡುಪಿಯಲ್ಲಿ ಪೈಲಟ್ ಪ್ರಾಜೆಕ್ಟ್ ಮಾಡಲಾಗಿದೆ. ಕೆರೆಗಳಲ್ಲಿ ಹೂಳು ಎತ್ತುವುದರಿಂದ ನೆರೆ ಆಗಲ್ಲ. ಬೆಂಗಳೂರಿನಲ್ಲಿ ಮನೆಗೆ ನೀರು ನುಗ್ಗಿದರೆ, ಹಳ್ಳಿಗಳಲ್ಲಿ ಜಮೀನು ಸವಕಳಿ ಆಗುತ್ತಿದೆ. ಅದನ್ನು ತಡೆಯುವಲ್ಲಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಜಾನುವಾರು ಕಾಯಿಲೆ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಅದಕ್ಕೆ ಲಸಿಕೆ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ರಾಜ್ಯದಲ್ಲಿ ತಾಯಿ ಮಕ್ಕಳ ಸಾವು ಸಂಖ್ಯೆ ಹೆಚ್ಚಳ
ಪಕ್ಕದ ರಾಜ್ಯಕ್ಕೆ ಹೋಲಿಸಿದರೆ ಹೆರಿಗೆಯಿಂದ ತಾಯಿ ಮಕ್ಕಳ ಸಾವು ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗಿದೆ. ಇದನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ನೆರೆಯ ತಮಿಳುನಾಡು, ಆಂಧ್ರಕ್ಕೆ ಹೋಲಿಸಿದರೆ ಸಾವಿನ ಪ್ರಮಾಣ ಹೆಚ್ಚಿದೆ. ಹೀಗಾಗಿ ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ.