ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪಠ್ಯ ಪುಸ್ತಕದ ಬದಲಾವಣೆ ಖಚಿತ. ಈ ಸಂಬಂಧ ಸಾಹಿತಿಗಳು ಹಾಗೂ ತಜ್ಞರ ಜೊತೆ ಮಾತನಾಡಿದ್ದೇನೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂದಿನ ವರ್ಷ ಈ ರೀತಿ ಸಮಸ್ಯೆ ಆಗದಂತೆ ಈಗಿನಿಂದಲೇ ಕ್ರಮ ಕೈಗೊಳ್ಳುತ್ತೇವೆ. ಪಠ್ಯ ಪರಿಷ್ಕರಣೆ ಸಂಬಂಧ ಸೋಮವಾರ ಸಂಜೆ ಬಂದು ಕಾಣುವಂತೆ ಸಿಎಂ ಹೇಳಿದ್ದಾರೆ ಎಂದರು.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲು ಖಾಸಗಿ ಕಂಪನಿಯೊಂದು ಮುಂದೆ ಬಂದಿದೆ. ಶೀಘ್ರದಲ್ಲೇ ಕಾರ್ಯಾಚರಣೆ ಆರಂಭಗೊಳ್ಳಲಿದೆ. ಏರ್ಪೋರ್ಟ್ ಅನ್ನು ರಾಜ್ಯ ಸರ್ಕಾರ ನಿರ್ವಹಣೆ ಮಾಡಬೇಕಿದೆ. ನಾವು ಬಿಜೆಪಿಯವರ ಹಾಗೆ ಏರ್ಪೋರ್ಟ್ ಅನ್ನು ಮಾರಾಟ ಮಾಡುವುದಿಲ್ಲ. ಬದಲಾಗಿ ನಿರ್ವಹಣೆ ಮಾಡುತ್ತೇವೆ ಎಂದರು.
ಕೆಲವೊಂದು ಭಾಗದಲ್ಲಿ ಆಡಳಿತವನ್ನು ಬಿಗಿ ಮಾಡುವ ಅಗತ್ಯವಿದೆ. ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಯವರು ಈಗಾಗಲೇ ಕೆಲವೊಂದು ಕ್ರಮ ಕೈಗೊಂಡಿದ್ದಾರೆ. ಅರಣ್ಯ ವಿಷಯದಲ್ಲಿ ಜನರಿಗೆ ರಕ್ಷಣೆ ಮತ್ತು ಹಕ್ಕು ಪತ್ರ ನೀಡಬೇಕಿದೆ. ಮುಖ್ಯಮಂತ್ರಿ ಮತ್ತು ಡಿಸಿಎಂ ಶಿವಮೊಗ್ಗಕ್ಕೆ ಬಂದು ವಾಗ್ದಾನ ನೀಡಿದ್ದಾರೆ.
ನನ್ನ ಇಲಾಖೆಯಲ್ಲಿ ಶಿಕ್ಷಕರ ಕೊರತೆಯಿದೆ. ಶಿಕ್ಷಕರ ಕೌನ್ಸಲಿಂಗ್ ಆರಂಭವಾಗಿದೆ. 52 ಶಾಲೆಗಳಲ್ಲಿ ಅತಿಥಿ ಶಿಕ್ಷಕರು ಬೇಡ ಎಂದು ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸಿಲ್ಲ.
ಅದಕ್ಕಾಗಿ ಕಾಯಂ ಶಿಕ್ಷಕರ ನೇಮಕ ಸಂಬಂಧ ಕ್ರಮ ಕೈಗೊಂಡಿದ್ದೇನೆ ಎಂದರು. ಇದೇ ವೇಳೆ ಜಲ್ ಜೀವನ್ ಮಿಷನ್ ಬಗ್ಗೆ ಮಾತನಾಡಿದ ಸಚಿವರು, ಕುಡಿಯುವ ನೀರಿನ ಪೂರೈಕೆ ಸಂಬಂಧ ಕ್ರಮ ಕೈಗೊಳ್ಳಲಾಗುವುದು. ಯೋಜನೆಯಡಿ ಜಿಲ್ಲೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ತನಿಖೆ ನಡೆಸಲು ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಶರಾವತಿ ಸಂತ್ರಸ್ತರಿಗೆ 9 ಸಾವಿರ ಎಕರೆ ಬಿಡುಗಡೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ತಿರಸ್ಕಾರ ಮಾಡಿದೆ. ಆದರೆ ಈ ಬಗ್ಗೆ ಸಂತ್ರಸ್ತರು ಭಯಪಡುವುದು ಬೇಡ, ತಕ್ಷಣವೇ ಮಧ್ಯಂತರ ಪರಿಹಾರದ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು ಎಂದರು. ಅಧಿಕಾರಿಗಳೊಂದಿಗೆ ಮಧು ಬಂಗಾರಪ್ಪ ಸಭೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಅನೌಪಚಾರಿಕ ಸಭೆ ನಡೆಸಿದ ಸಚಿವ ಮಧು ಬಂಗಾರಪ್ಪ ಅವರು, ಮಾಹಿತಿ ಕಲೆ ಹಾಕಿದರು. ಸಾಗರದಲ್ಲಿ ಡಯಾಲಿಸಿಸ್ ಯಂತ್ರಗಳು ಸರಿಯಿಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿ ಡಿಹೆಚ್ಓ ಮೇಲೆ ಹರಿಹಾಯ್ದರು. ಇರುವ 7 ಡಯಾಲಿಸಿಸ್ ಯಂತ್ರಗಳು ಕೆಲಸ ಮಾಡಿಲ್ಲ ಎಂದಾದರೆ ಬದಲಾಯಿಸಿ. ಯಾಕೆ ಬದಲಾಯಿಸಲು ಹಣ ಇಲ್ವಾ? ಯಂತ್ರ ಸರಿಪಡಿಸಲು ಆಗಿಲ್ಲವೆಂದಾದರೆ, ಆ ಬೋರ್ಡ್ ಅನ್ನು ಮುಚ್ಚಿಬಿಡಿ. ನಮ್ಮ ಬಳಿ ಬಡವರು ಬರುತ್ತಾರೆ ಕಣ್ರೀ, ಪಾಪ ಆ ಬಡವರು ಏನು ಮಾಡಬೇಕು. ಶಿವಮೊಗ್ಗಕ್ಕೆ ಬಂದು ಹೋಗಲು ಅವರ ಬಳಿ ಹಣ ಇರಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಸಚಿವ ಮಧು ಬಂಗಾರಪ್ಪ, ಡಿಸಿಯವರೇ ಇದಕ್ಕೆ ಬೇಕಾದ ಅನುದಾನದ ಬಗ್ಗೆ ನೋಡಿ, ಕೂಡಲೇ ಡಯಾಲಿಸಿಸ್ ಯಂತ್ರ ಸರಿಪಡಿಸಲು ಸೂಚನೆ ನೀಡಿದರು. ಇದಕ್ಕೂ ಮುನ್ನ ಕೆಎನ್ಎಲ್ ಅಧಿಕಾರಿಗಳಿಗೂ ತರಾಟೆಗೆ ತೆಗೆದುಕೊಂಡ ಶಾಸಕ ಬೇಳೂರು, ಶರಾವತಿ ಮುಳುಗಡೆ ಸಂತ್ರಸ್ತ್ರರು ನಾವು, ನೀರಿಗಾಗಿ ನಾವು ತ್ಯಾಗ ಮಾಡಿದ್ದೇವೆ. ಆದರೆ ನೀವು ನೀರನ್ನು ತೆಗೆದುಕೊಂಡು ಹೋಗಿ ಶಿಕಾರಿಪುರಕ್ಕೆ ನೀಡಿದ್ದೀರಾ, ಬಡ ರೈತರಿಗೆ ನೀರು ತಲುಪುವಂತಾಗಬೇಕು, ಡೆಡ್ ಸ್ಟೋರೇಜ್ ಆಗುವವರೆಗೂ ನೀರು ಖಾಲಿ ಮಾಡದೇ, ನೀರು ಶೇಖರಣೆಗೆ ಕ್ರಮ ಕೈಗೊಳ್ಳಿ ಎಂದರು.
ಮಧು ಬಂಗಾರಪ್ಪಗೆ ಸನ್ಮಾನ-ಅಭಿನಂದನೆ
ಶಿಕ್ಷಣ ಸಚಿವರಾದ ಹಿನ್ನೆಲೆ ಮಧು ಬಂಗಾರಪ್ಪಗೆ ಸನ್ಮಾನ ಮಾಡಿ ಅಭಿನಂದಿಸಲಾಯಿತು. ನಂತರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕಡಿಮೆ ಸಮಯದಲ್ಲಿ ನನಗೆ ಎಲ್ಲಾ ರೀತಿಯ ಅವಕಾಶ ನೀಡಿದೆ. ಇದೀಗ ಸಚಿವ ಸ್ಥಾನವನ್ನೂ ನೀಡಿದ್ದು ಇದಕ್ಕೆ ಕಾರಣರಾಗಿದ್ದು ಜಿಲ್ಲೆಯ ಜನತೆ. ಮುಂದಿನ ದಿನಗಳಲ್ಲಿ ಎಲ್ಲಾ ಚುನಾವಣೆಯ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ನಾನು ಜೊತೆಗಿರುತ್ತೇನೆ ಎಂದರು.
ಶಿಕ್ಷಣ ಇಲಾಖೆಯಲ್ಲಿ ದೊಡ್ಡ ಮಟ್ಟದ ಮಾನವ ಸಂಪನ್ಮೂಲ ಹೊಂದಿದೆ. ಸುಮಾರು 1.20 ಕೋಟಿ ಮಕ್ಕಳು ರಾಜ್ಯದಲ್ಲಿ ಓದುತ್ತಿದ್ದಾರೆ. ಅದೇ ರೀತಿ ಶಿಕ್ಷಕರ ಸಂಖ್ಯೆಯೂ ದೊಡ್ಡದಿದೆ. ಪಕ್ಷದ ನಾಯಕರು ನನ್ನ ಮೇಲೆ ನಂಬಿಕೆಯಿಟ್ಟು ಈ ಖಾತೆ ಕೊಟ್ಟಿದ್ದಾರೆ. ಗ್ಯಾರಂಟಿ ಸ್ಕೀಂ ಮೂಲಕ ಕಾಂಗ್ರೆಸ್ ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸಿದೆ. ಇದು ದೇಶದಲ್ಲೇ ಅಪರೂಪದ ಕಾರ್ಯಕ್ರಮವಾಗಿದೆ. ಜನರು ಕಾಂಗ್ರೆಸ್ಗೆ ಗ್ಯಾರಂಟಿ ಕೊಟ್ಟಿದ್ದು ಬಿಜೆಪಿ ವಾರಂಟಿ ಕಳೆದುಕೊಂಡಿದೆ ಎಂದರು.