ಕೂಗು ನಿಮ್ಮದು ಧ್ವನಿ ನಮ್ಮದು

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪ್ರಯತ್ನ: ಬೆಳಗಾವಿ ತಾಲೂಕು ಪ್ರವಾಹ ಪೀಡಿತ ತಾಲೂಕು ಪಟ್ಟಿಗೆ ಸೇರ್ಪಡೆ

ಬೆಳಗಾವಿ: ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದಾಗಿ ಬೆಳಗಾವಿ ತಾಲೂಕು ಪ್ರವಾಹ ಪೀಡಿತ ತಾಲೂಕುಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದೆ.

ಹೊಸದಾಗಿ ಮತ್ತೆ 22 ತಾಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶಗಳ ಪಟ್ಟಿಗೆ ರಾಜ್ಯ ಸರ್ಕಾರ ಸೇರ್ಪಡೆ ಮಾಡಿದೆ. ಇದರಲ್ಲಿ ಬೆಳಗಾವಿಯೂ ಸೇರಿದೆ.

ಈ ಮೊದಲು 61 ತಾಲೂಕುಗಳನ್ನು ನೆರೆ ಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಬೆಳಗಾವಿ ತಾಲೂಕನ್ನು ಸೇರ್ಪಡೆ ಮಾಡದಿರುವುದಕ್ಕೆ ತೀವ್ರ ಆಕ್ರೋಶಗೊಂಡ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಕೂಡಲೇ ಸೇರ್ಪಡೆಗೆ ವ್ಯವಸ್ಥೆ ಮಾಡದಿದ್ದರೆ ನಿಮ್ಮ ಕಚೇರಿ ಎದುರು ಧರಣಿ ಕುಳಿತುಕೊಳ್ಳುವುದಾಗಿ ಜಿಲ್ಲಾಧಿಕಾರಿಗಿ ಎಚ್ಚರಿಕೆ ನೀಡಿದ್ದರು. ಜೊತೆಗೆ ಬೆಂಗಳೂರಿಗೆ ತೆರಳಿ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೂ ವಿವರ ಮಾಹಿತಿ ನೀಡಿ ಪ್ರವಾಹ ಪೀಡಿತ ತಾಲೂಕು ಪಟ್ಟಿಗೆ ಬೆಳಗಾವಿ ಸೇರಿಸಲು ಕೋರಿದ್ದರು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಳಗಾವಿ ತಾಲೂಕಿನ ಪ್ರವಾಹ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ. ಇಲ್ಲಿನ ಪರಿಸ್ಥಿತಿ ನೋಡಿ ಹೋಗಿದ್ದಾರೆ. ಹಾಗಾಗಿ ಕೂಡಲೇ ಬೆಳಗಾವಿ ತಾಲೂಕನ್ನು ಪ್ರವಾಹ ಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲೇಬೇಕು ಎಂದು ಲಕ್ಷ್ಮಿ ಹೆಬ್ಬಾಳಕರ್ ಪಟ್ಟು ಹಿಡಿದಿದ್ದರು.

ಇದರಿಂದಾಗಿ ಜಿಲ್ಲಾಧಿಕಾರಿಗಳು ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ರಾಜ್ಯಸರಕಾರಕ್ಕೆ ಹೊಸ ಪ್ರಸ್ತಾವನೆ ಕಳಿಸಿದ್ದರು. ಪರಿಣಾಮವಾಗಿ ಬೆಳಗಾವಿ ಪ್ರವಾಹಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಯಾಗಿದೆ.

ರಾಜ್ಯ ಸರ್ಕಾರ ಬೆಳಗಾವಿ ಸೇರಿದಂತೆ ಮತ್ತೆ 22 ತಾಲೂಕುಗಳನ್ನು ಪ್ರವಾಹಪೀಡಿತ ಪ್ರದೇಶ ಎಂದು ಘೋಷಿಸಿದೆ. ಈ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.

error: Content is protected !!