ಶುಭ ಹಾರೈಕೆ ಜೊತೆಗೆ ಅಗತ್ಯ ಪರಿಕರಗಳನ್ನು ವಿತರಿಸಿದ ಶಾಸಕಿ
ಬೆಳಗಾವಿ: ಜುಲೈ 19 ಮತ್ತು 22ರಂದು 2020-21 ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಗಳಿಗೆ ಹಾಜರಾಗುತ್ತಿರುವ ವಿವಿಧ ಭಾಷಾ ಮಾಧ್ಯಮಗಳ ವಿದ್ಯಾರ್ಥಿಗಳ ಕಾಳಜಿಗೆ ನಿಂತ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅಧಿಕಾರಿಗಲು ಹಾಗೂ ಶಿಕ್ಷಕರ ಪೂರ್ವಭಾವಿ ಸಭೆ ನಡೆಸಿ, ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಅಗತ್ಯವಾದ ಮಾಸ್ಕ್, ಬಿಸ್ಕೀಟ್, ನೀರಿನ ಬಾಟಲ್ ಮತ್ತಿತರ ಸಾಮಗ್ರಿಗಳನ್ನು ವಿತರಿಸಿದರು.
ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳಲಿಕ್ಕೆ ಎಸ್. ಎಸ್. ಎಲ್. ಸಿ ಪರೀಕ್ಷೆಗಳು ಮೊದಲ ಹೆಜ್ಜೆಗಳಾಗಿದ್ದು, ಈ ಹೆಜ್ಜೆಗಳು ಅವರ ಮುಂದಿನ ಉನ್ನತ ವ್ಯಾಸಂಗಕ್ಕಾಗಿ ದಾರಿಯನ್ನು ತೋರಿಸುತ್ತವೆ. ಈ ಸಂದರ್ಭದಲ್ಲಿ ಅವರ ಆರೋಗ್ಯ ಸೇರಿದಂತೆ ಎಲ್ಲ ರೀತಿಯಲ್ಲೂ ಕಾಳಜಿವಹಿಸಬೇಕು. ಪರೀಕ್ಷೆಗಳಿಗೆ ಹಾಜರಾಗುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ನನ್ನ ಶುಭ ಹಾರೈಕೆಗಳು, ಯಾವುದೇ ಆತಂಕವಿಲ್ಲದೆ, ನಿರಾಂತಕವಾಗಿ ಪರೀಕ್ಷೆಗಳನ್ನು ಬರೆಯುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳು ಹಾಗೂ ಶಿಕ್ಷಕರಿಗೆ ಸೂಚಿಸಿದರು.
ನಿಮ್ಮ ಜೀವನ ಸದಾಕಾಲವೂ ಉಜ್ವಲವಾಗಿರಲೆಂದು ಪ್ರೋತ್ಸಾಹಿಸುವ ಸಂದೇಶ ಹೊತ್ತ ಪತ್ರಗಳನ್ನು ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಜುಟ್ನವರ, ಹರ್ಷ ಶುಗರ್ಸ್ ಎಂಡಿ ಚನ್ನರಾಜ ಹಟ್ಟಿಹೊಳಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಎಲ್ಲ ಹೈಸ್ಕೂಲ್ ಗಳ ಮುಖ್ಯೋಪಾಧ್ಯಾಯರು, ಸಿಬ್ಬಂದಿ ಉಪಸ್ಥಿತರಿದ್ದರು.