ಬೆಳಗಾವಿ: ಬೆಳಗುಂದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆ ಕುರಿತು ಗ್ರಾಮಸ್ಥರು ದೂರು ನೀಡಿ, ಸರಿಪಡಿಸಲು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬುಧವಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಬೆಳಗುಂದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವು ಹಲವಾರು ಅವ್ಯವಸ್ಥೆಗಳಿಂದ ಕೂಡಿದೆ. ಈ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ, ಆದಷ್ಟು ಬೇಗ ಸರಿಪಡಿಸಬೇಕೆಂದು ಮನವಿ ಮಾಡಿದ್ದರು. ಹೀಗಾಗಿ ಇವತ್ತು ಖುದ್ದಾಗಿ ಭೇಟಿ ನೀಡಿದ ಲಕ್ಷ್ಮಿ ಹೆಬ್ಬಾಳಕರ್, ಅಲ್ಲಿನ ಕುಂದುಕೊರತೆಗಳಾದ ಬೆಡ್ ಗಳ ಅಭಾವ, ಶೌಚಾಲಯಗಳ ಕೆಲಸ, ಪ್ಲಂಬರ್ ಕೆಲಸ, ನೀರಿನ ಅನಾನುಕೂಲತೆ, ಕಾಂಪೌಂಡ್ ನಿರ್ಮಾಣ, ಕಿಟಕಿಗಳಿಗೆ ಸೊಳ್ಳೆಯ ಪರದೆ, ಆರೋಗ್ಯ ಕೇಂದ್ರದಲ್ಲಿ ಸ್ಟಾಪ್ ನರ್ಸ್ ಗಳ ಕೂರತೆ ಹಾಗೂ ಇನ್ನಿತರ ಕೊರತೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಆರೋಗ್ಯ ಕೇಂದ್ರದ ಬಗ್ಗೆ ತ್ವರಿತಗತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸರಿಪಡಿಸುವ ಬಗ್ಗೆ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು, ವೈದ್ಯಾಧಿಕಾರಿ ರಾಮಕೃಷ್ಣ ಹರಿ, ಮೃಣಾಲ ಹೆಬ್ಬಾಳಕರ್, ಮನೋಹರ ಬೆಳಗಾಂವಕರ್, ಯುವರಾಜ ಕದಂ, ಮಹೇಶ ಪಾಟೀಲ, ನಾಮದೇವ್ ಮೋರೆ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.