ಕೂಗು ನಿಮ್ಮದು ಧ್ವನಿ ನಮ್ಮದು

ಇಂದು ಕೆಎಸ್‌ಆರ್‌ಟಿಸಿ ನೌಕರರ ಧರಣಿ: ಬಸ್‌ ಸಂಚಾರದಲ್ಲಿ ವ್ಯತ್ಯಯ?

ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಮಂಗಳವಾರ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದರೂ ಬಸ್‌ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದು ನೌಕರರ ಯೂನಿಯನ್‌ಗಳು ಮತ್ತು ಸಾರಿಗೆ ಸಂಸ್ಥೆಗಳು ಸ್ಪಷ್ಟಪಡಿಸಿವೆ.

ಪ್ರತಿಭಟನೆಯಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ (ವಾಯವ್ಯ), ಕೆಕೆಆರ್‌ಟಿಸಿ (ಕಲ್ಯಾಣ) ನಾಲ್ಕು ಸಾರಿಗೆ ನಿಗಮಗಳಿಂದ ಸೀಮಿತ ಸಂಖ್ಯೆಯಲ್ಲಿ ಸಿಬ್ಬಂದಿ ಭಾಗವಹಿಸುತ್ತಿದ್ದಾರೆ. ಜಿಲ್ಲಾ ಬಸ್‌ ಘಟಕಗಳ (ಡಿಪೋ) ಮುಂಭಾಗ, ಹುಬ್ಬಳ್ಳಿ, ಕಲಬುರಗಿ, ಬೆಂಗಳೂರು ಸಾರಿಗೆ ನಿಗಮಗಳ ವಿಭಾಗೀಯ ಕಚೇರಿ ಮುಂಭಾಗ ಮತ್ತು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆಗಳು ನಡೆಯಲಿವೆ. ಪ್ರಯಾಣಿಕರಿಗೆ ಬಸ್‌ ಸೌಲಭ್ಯದಲ್ಲಿ ಯಾವುದೇ ಸಮಸ್ಯೆ ಉಂಟು ಮಾಡುವ ಉದ್ದೇಶವಿಲ್ಲ. ರಜೆ ಇರುವ ಸಿಬ್ಬಂದಿಗಳು, ಸಂಘದ ಪ್ರಮುಖರು ಮಾತ್ರ ಭಾಗವಹಿಸಲಿದ್ದಾರೆ ಎಂದು ರಾಜ್ಯ ಸಾರಿಗೆ ನೌಕರರ ಮುಖಂಡ ಅನಂತ ಸುಬ್ಬರಾವ್‌ ತಿಳಿಸಿದ್ದಾರೆ.

ಇತ್ತ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲ ಸಾರಿಗೆ ನಿಗಮಗಳು ಕೂಡ ಬಸ್‌ಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಯಥಾಸ್ಥಿತಿಯಲ್ಲಿ ಬಸ್‌ ಸೌಲಭ್ಯವಿರಲಿದೆ ಎಂದು ಪ್ರಕಟಣೆ ನೀಡಿವೆ. ಸಿಬ್ಬಂದಿಗಳಿಗೆ ಅನಗತ್ಯ ರಜೆ ನೀಡಿಲ್ಲ. ತಪ್ಪದೆ ಕೆಲಸಕ್ಕೆ ಹಾಜರಾಗುವಂತೆ ಸಿಬ್ಬಂದಿಗೆ ಮೌಖಿಕ ಸೂಚನೆಯನ್ನು ನೀಡಲಾಗಿದೆ ಎಂದು ಸಾರಿಗೆ ನಿಗಮದ ಮೂಲಗಳು ತಿಳಿಸಿವೆ

ಪ್ರತಿಭಟನೆ ಯಾಕೆ?

ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುತ್ತಿದ್ದ ಸಾರಿಗೆ ನಿಗಮಗಳು ಆರು ವರ್ಷ ಕಳೆದರೂ ವೇತನ ಪರಿಷ್ಕರಣೆ ಮಾಡಿಲ್ಲ. ಚುನಾವಣೆ ಘೋಷಣೆ ಪೂರ್ವದಲ್ಲಿ ವೇತನ ಪರಿಷ್ಕರಣೆ ಮಾಡಬೇಕು. ಸಿಬ್ಬಂದಿಯಿಂದ ನಿಯಮಬಾಹಿರವಾಗಿ ಹೆಚ್ಚುವರಿ ಸೇವೆ ಪಡೆಯುತ್ತಿದ್ದು, ಕೆಲಸದ ಅವಧಿ ಎಂಟು ಗಂಟೆಗೆ ಸೀಮಿತಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಯೊಂದಿಗೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಾರಿಗೆ ಯೂನಿಯನ್‌ಗಳ ಮುಖಂಡರು ಮಾಹಿತಿ ನೀಡಿದ್ದಾರೆ.

error: Content is protected !!