ಬಾಗಲಕೋಟೆ: ಕರೇಕ್ಟ್ ಆಗಿ ವೇತನ ಸಿಗದಿದ್ದಕ್ಕೆ ಬೇಸರಗೊಂಡು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ KSRTC ವಾಯುವ್ಯ ವಿಭಾಗದ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ಬಸ್ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ
ಕೆರೂರು ಪಟ್ಟಣದ ನಿವಾಸಿ ಭರಮಪ್ಪ ಗೊಂದಿ (೪೪) ಮೃತಪಟ್ಟ ಚಾಲಕ, ನವೆಂಬರ್ ೨ರಂದು ಮನೆಯಲ್ಲಿ ವಿಷ ಸೇವಿಸಿದ್ದರು. ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಶುಕ್ರವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಭರಮಪ್ಪ ಸಾವನ್ನಪ್ಪಿದ್ದಾರೆ. ಸಮಯಕ್ಕೆ ಸರಿಯಾಗಿ ವೇತನ ಸಿಗದೇ ಲಕ್ಷಾಂತರ ರೂಪಾಯಿ ಸಾಲ ತೀರಿಸುವುದು ಹೇಗೆಂದು ಮನನೊಂದು ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.