ಬೆಂಗಳೂರು: ಕೆ ಎಸ್ ಆರ್ ಟಿ ಸಿ ಯು ಕೊವಿಡ್ ಸಮಯದಲ್ಲಿ ಸಿಬ್ಬಂದಿಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಾಗೂ ಶ್ವಾಸಕೋಶವನ್ನು ಕಾಪಾಡುವ “ಸಿಂಹ ಕ್ರಿಯಾ ಯೋಗ” ಕಾರ್ಯಕ್ರಮವನ್ನು ಈಶಾ ಫೌಂಡೇಶನ್ ರವರ ಸಹಯೋಗದೊಂದಿಗೆ ಹಮ್ಮಿಕೊಂಡಿರುತ್ತದೆ.
ಇಂದು ಶಿವಯೋಗಿ ಸಿ.ಕಳಸದ, ವ್ಯವಸ್ಥಾಪಕ ನಿರ್ದೇಶಕರು, ಕೆ ಎಸ್ ಆರ್ ಟಿ ಸಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ನಿಗಮದ ಸಿಬ್ಬಂದಿಗಳು ಶ್ರಮ ಜೀವಿಗಳು, ಹಗಲು ರಾತ್ರಿಯನ್ನದೆ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ , ಸಾವಿರಾರು ವರುಷಗಳ ಇತಿಹಾಸವನ್ನು ಹೊಂದಿರುವ ಯೋಗ ಕಾರ್ಯಕ್ರಮವು ದೈಹಿಕ, ಮಾನಸಿಕ ಹಾಗೂ ಭೌತಿಕ ಆರೋಗ್ಯಕ್ಕೆ ಸಹಕಾರಿಯಾಗಲಿದೆ.
ಈಶಾ ಫೌಂಡೇಶನ್ ರವರ ಸದರಿ ಯೋಗ ಕಾರ್ಯಕ್ರಮವು ಅತ್ಯಂತ ಪರಿಣಾಮಕಾರಿ ಯಾಗಿದ್ದು, ಮನೆಯಲ್ಲಿಯೇ ಮಾಡಬಹುದಾದ ಸರಳ ಕ್ರಿಯೆ ಇದಾಗಿದೆ. ಕಾರ್ಯಕ್ರಮವು ಕನ್ನಡದಲ್ಲಿಯೇ ರೂಪಿಸಲಾಗಿದ್ದು, ಸಿಬ್ಬಂದಿಗಳಿಗೆ ಯಾವುದೇ ಪ್ರಶ್ನೆಗಳಿಗೂ ಕಾರ್ಯಕ್ರಮದ ಕೊನೆಯಲ್ಲಿ ಉತ್ತರಿಸಲಾಗುವುದು.
ದಿನಾಂಕ: 01.07.2021 ರಿಂದ ಬೆಳಗ್ಗೆ 7 ಗಂಟೆಗೆ ಹಾಗೂ ಸಂಜೆ 6. ಗಂಟೆಗೆ-30 ನಿಮಿಷಗಳ ಅವಧಿ ,ಪ್ರತಿ ದಿನ (ಒಂದು ವಾರಗಳ ಕಾಲ, ಶನಿವಾರ ಮತ್ತು ಭಾನುವಾರವೂ ಸೇರಿದಂತೆ) ಎಲ್ಲಾ ಅಧಿಕಾರಿ/ ಸಿಬ್ಬಂದಿಗಳ ವಾಟ್ಸಾಪ್ ಗುಂಪುಗಳಲ್ಲಿ ಕಾರ್ಯಕ್ರಮದ ಯೂಟ್ಯೂಬ್ ಲಿಂಕ್ ಅನ್ನು ರವಾನಿಸಿ, ಸಮಸ್ತ ಸಿಬ್ಬಂದಿಗೂ ಕುಟುಂಬದವರು ಅವರಿಗೆ ಅನುಕೂಲವಾದ ಸಮಯದಲ್ಲಿ ಭಾಗವಹಿಸಿ ಸದರಿ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳ ಬೇಕಾಗಿ ತಿಳಿಸಿದರು.
ಕೊವಿಡ್ ನಿಂದಾಗಿ ಜನರ ಜೀವನಶೈಲಿ ಬದಲಾವಣೆಯಾಗಬೇಕಾಗಿರುವುದು ಅನಿವಾರ್ಯವಾಗಿದೆ. ಅದರಲ್ಲಿಯೂ ಯೋಗ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ. ಈಶಾ ಫೌಂಡೇಶನ್ ರವರು ನಮ್ಮ ಸಿಬ್ಬಂದಿಗಳಿಗಾಗಿ ಸಿದ್ಧಪಡಿಸಿರುವ ಈ ಯೋಗ ಕಾರ್ಯಕ್ರಮವು ಸಿಬ್ಬಂದಿಗಳ ಆರೋಗ್ಯ ಸ್ನೇಹಿ ಉಪಕ್ರಮವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಈಶಾ ಫೌಂಡೇಶನ್ ರವರಿಂದ ಶ್ರೀಮತಿ ರಾಧಿಕ ಶ್ರೀನಾಥ್, ನಿಗಮದ ಹಿರಿಯ ಅಧಿಕಾರಿಗಳು ಸಿಬ್ಬಂದಿಗಳು ಭಾಗವಹಿಸಿದ್ದರು.