ಕೂಗು ನಿಮ್ಮದು ಧ್ವನಿ ನಮ್ಮದು

ಮಾಸ್ಟರ್‌ ಪ್ಲಾನ್‌ಗೆ ರಾಜ್ಯ ಸರ್ಕಾರ ಅಸ್ತು

ಕೊಪ್ಪಳ :ಕಳೆದ ಹತ್ತಾರು ವರ್ಷಗಳಿಂದ ನಗರದ ಮಾಸ್ಟರ್‌ ಪ್ಲಾನ್‌ ಅನುಮೋದನೆಗೆ ಇದ್ದ ಅಡ್ಡಿ ನಿವಾರಣೆಯಾಗಿದ್ದು, ಕೊನೆಗೂ ರಾಜ್ಯ ಸರ್ಕಾರ ಅಸ್ತು ಎಂದಿದೆ. ಈ ಮೂಲಕ ಜಿಲ್ಲಾ ಕೇಂದ್ರ ಕೊಪ್ಪಳದ ಬೆಳವಣಿಗೆಗೆ ನೀಲನಕ್ಷೆ ಸಿದ್ಧವಾದಂತಾಗಿದೆ. ಜತೆಗೆ ಸುಮಾರು ವರ್ಷಗಳಿಂದ ಲೇಔಟ್‌ ನಿರ್ಮಾಣಕ್ಕೂ ಇದ್ದ ಅಡ್ಡಿ ನಿವಾರಣೆಯಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದ ನೀಲನಕ್ಷೆ ಇಲ್ಲದಿರುವುದರಿಂದ ತಲೆ ಎತ್ತುತ್ತಿದ್ದ ಅನಧಿಕೃತ ಲೇಔಟ್‌ಗಳಿಗೂ ಬ್ರೇಕ್‌ ಬೀಳಲಿದೆ. ನಗರದ ವ್ಯಾಪ್ತಿ ಸದ್ಯ ಸುಮಾರು 3, 4 ಕಿಮೀ ಇದೆ. ಇನ್ಮುಂದೆ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಸುಮಾರು 12 ಗ್ರಾಮಗಳನ್ನು ಒಳಗೊಂಡು ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲಿದೆ.

2009ರಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿ ಮತ್ತು ನಗರ ವ್ಯಾಪ್ತಿಯ ಮಿತಿ ಹೆಚ್ಚಿಸಿ ನೀಲನಕ್ಷೆ ತಯಾರಿಸಿ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ, ನಾನಾ ಕಾರಣಗಳಿಗಾಗಿ ಅದನ್ನು ಮುಂದೂಡಲಾಗಿತ್ತು. ಇದರಿಂದ ನಗರ ಬೆಳವಣಿಗೆಗೆ ಹಿನ್ನಡೆಯಾಗಿತ್ತು. ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿತ್ತು. ಆದರೆ, ಇದೆಲ್ಲಕ್ಕೂ ಬ್ರೇಕ್‌ ಬೀಳಲಿದೆ.
ಗೆಜೆಟ್‌ನಲ್ಲಿ ಪ್ರಕಟ: ರಾಜ್ಯ ಸರ್ಕಾರ ಜುಲೈ ತಿಂಗಳ ಗೆಜೆಟ್‌ನಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಮಂಡಿಸಿರುವ ನಗರ ಮಹಾಯೋಜನೆ ಅನುಮೋದಿಸಿ ಪ್ರಕಟಣೆ ನೀಡಿದೆ. ಇದರಿಂದ ನಗರ ವ್ಯಾಪ್ತಿಯ ಪ್ರಗತಿಗೆ ನಿಖರ ದಿಕ್ಕು ಸಿಗಲಿದೆ. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಸಲ್ಲಿಸಿರುವ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಮುಂದಿನ ಬೆಳವಣಿಗೆ ಗಮನಿಸಿ ನಾನಾ ಷರತ್ತುಗಳನ್ನು ಒಳಪಟ್ಟು ಅನುಮೋದನೆ ನೀಡಲಾಗಿದೆ. ಈ ಮೂಲಕ ರಿಂಗ್‌ ರಸ್ತೆ, ಲೇಔಟ್‌ ಲಿಂಕ್‌ ರಸ್ತೆ ಮಾರ್ಗ, ನೀರು ಹೊರಹೋಗುವುದಕ್ಕೆ ದಾರಿಗಳು ಎಲ್ಲದಕ್ಕೂ ನಿಖರ ಮ್ಯಾಪ್‌ ಸಿದ್ಧಪಡಿಸಲಾಗಿದೆ. ಅದನ್ನು ಮಾರ್ಕ್ ಮಾಡಿರುವ ರಾಜ್ಯ ಸರ್ಕಾರ ಮ್ಯಾಪ್‌ಗೆ ಸೀಲ್‌ ಹಾಕಿದೆ. ಇನ್ಮುಂದೆ ಏನಿದ್ದರೂ ಈ ಮ್ಯಾಪಿನಡಿಯಲ್ಲಿಯೇ ಪ್ರಗತಿಯಾಗಬೇಕಾಗಿದೆ.

ಫಸ್ಟ್‌ ರಿಂಗ್‌ ರಸ್ತೆ, ಸೆಕೆಂಡ್‌ ರಿಂಗ್‌ ರಸ್ತೆ ಹಾಗೂ ಮೂರನೇ ರಿಂಗ್‌ ರಸ್ತೆ ಒಳಗೊಂಡಿದೆ. ನಗರ ವ್ಯಾಪ್ತಿಯಲ್ಲಿ ಮೊದಲ ರಿಂಗ್‌ ರಸ್ತೆ ನಿರ್ಮಾಣಕ್ಕೂ ನಿಖರ ಮಾರ್ಗ ಗುರುತಿಸಲಾಗಿದ್ದರೆ ಎರಡನೇ ರಿಂಗ್‌ ರಸ್ತೆಯನ್ನು ಈಗಿರುವ ಬೈಪಾಸ್‌ ರಸ್ತೆಗಳನ್ನೇ ಕೊಂಡಿಯಾಗಿಸಿಕೊಂಡು ಅಭಿವೃದ್ಧಿ ಮಾಡಲಾಗುತ್ತದೆ. 3ನೇ ರಿಂಗ್‌ ರಸ್ತೆಯಷ್ಟೇ ಗುರುತಿಸಬೇಕಾಗಿದೆ.

ವ್ಯಾಪ್ತಿಯ ವಿಸ್ತಾರ ಹೆಚ್ಚಳ: ನಗರ ವ್ಯಾಪ್ತಿಯ 4870 ಹೆಕ್ಟೇರ್‌ ಪ್ರದೇಶವನ್ನು ಗುರುತಿಸಲಾಗಿದ್ದು, 2664.86 ಹೆಕ್ಟೇರ್‌ ಜನವಸತಿಗಾಗಿ(ಶೇ. 54.71), ವಾಣಿಜ್ಯಕ್ಕಾಗಿ 249.49 ಹೆಕ್ಟೇರ್‌(ಶೇ. 5.12), ಕೈಗಾರಿಕೆಗಾಗಿ 449.59 ಹೆಕ್ಟೇರ್‌(ಶೇ. 9.23), ಸಾರ್ವಜನಿಕ ಉಪಯೋಗಕ್ಕಾಗಿ 257.14 ಹೆಕ್ಟೇರ್‌(ಶೇ. 5.28), ಬಯಲು ಜಾಗ ಮತ್ತು ಉದ್ಯಾನಕ್ಕಾಗಿ ಶೇ. 15 ಹಾಗೂ ಸಂಚಾರಕ್ಕಾಗಿ 777.53 ಹೆಕ್ಟೇರ್‌ ನಿಗದಿ ಮಾಡಲಾಗಿದೆ.

ಕೊಪ್ಪಳ ನಗರ ವ್ಯಾಪ್ತಿ 3- 4 ಕಿಮೀ ಇದ್ದು, ಈಗ ಸುಮಾರು 10 ಕಿಮೀ ವ್ಯಾಪ್ತಿಯಾಗಲಿದೆ. ಇದರ ವ್ಯಾಪ್ತಿಯಲ್ಲಿ ಕೊಪ್ಪಳ ಸುತ್ತಮುತ್ತಲು ಇರುವ 12 ಗ್ರಾಮಗಳು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರಲಿದೆ. ಇಲ್ಲಿಯ ಅಭಿವೃದ್ಧಿ ಮತ್ತು ನಿರ್ಮಾಣ ಕಾರ್ಯಗಳು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ನಿಯಮಾನುಸಾರವೇ ನಡೆಯಲಿವೆ. ನಗರ ವ್ಯಾಪ್ತಿಯಲ್ಲಿ ಅನ್ವಯವಾಗುವ ನಿಯಮಗಳು ಸಹ ಅನ್ವಯವಾಗಲಿವೆ. ಈಗಾಗಲೇ ಇರುವ ರಸ್ತೆ, ಕಟ್ಟಡ ಹೊರತುಪಡಿಸಿ, ನೂತನವಾಗಿ ನಿರ್ಮಾಣವಾಗುವ ಬಡಾವಣೆಗಳಿಗೆ ಮಾತ್ರ ಹೊಸ ನಿಯಮಗಳು ಅನ್ವಯವಾಗಲಿವೆ.

error: Content is protected !!