ಕೊಪ್ಪಳ: ಆ ಪ್ರೇಮಿಗಳ ಮೂರು ವರ್ಷದ ಲವ್ ಬಗ್ಗೆ , ಆರು ತಿಂಗಳ ಹಿಂದಷ್ಟೇ ಇಡೀ ಊರಿಗೆ ಗೊತ್ತಾಗಿತ್ತು. ಯುವತಿ ಮನೆಯವರು ಹುಡಗನಿಗೆ ಎಚ್ಚರಿಕೆ ನೀಡಿ, ತಮ್ಮ ಮಗಳಿಗೆ ಎಂಗೇಜ್ ಮೆಂಟ್ ಗೂ ಸಿದ್ಧತೆ ಮಾಡಿಕೊಂಡಿದ್ರು. ವಿಷಯ ಗೊತ್ತಾಗಿ ಪ್ರೇಮಿಗಳು ರಾತ್ರೋ ರಾತ್ರಿ ಮನೆ ಬಿಟ್ಟು ಹೋಗಿದ್ದು, ಇದೀಗ ಯುವಕ ಶವವಾಗಿ ಪತ್ತೆ ಯಾಗಿದ್ದಾನೆ.
ಮಾವಿನ ತೋಪಿನಲ್ಲಿ ಬಿದ್ದಿರೋ ಶವ.. ಮುಗಿಲು ಮುಟ್ಟಿರೋ ಮೃತ ಯುವಕನ ಕುಟುಂಬಸ್ಥರ ಆಕ್ರಂದನ. ಈ ಎಲ್ಲ ದೃಶ್ಯ ಕಂಡು ಬಂದಿದ್ದು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಂಗಾಪೂರ ಗ್ರಾಮದಲ್ಲಿ. ಮಾವಿನ ತೋಪಿನಲ್ಲಿ ಶವವಾಗಿ ಬಿದ್ದಿರೋ ಈ ಯುವಕ ಸಂಗಾಪೂರ ಗ್ರಾಮದ 22 ವರ್ಷದ ಹನುಮೇಶ ಭೋವಿ ಅಂತಾ. ಈ ಯುವಕನ ಕೊಲೆಗೆ ಅಪ್ರಾಪ್ತ ಯುವತಿ ಜೊತೆಗಿದ್ದ ಪ್ರೀತಿ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಹೌದು.. 22 ವರ್ಷದ ಹನುಮೇಶ ಹಾಗೂ 17 ವರ್ಷದ ಯುವತಿ (ಹೆಸರು ಬಳಸಿಲ್ಲಾ) ಕಳೆದ ಮೂರು ವರ್ಷದಿಂದ ಪ್ರೀತಿಸಿದ್ದಾರೆ. ಅಷ್ಟೇ ಅಲ್ಲ ಕೈ ಕೈ ಹಿಡಿದು ಸುತ್ತಾಡಿದ್ದಾರೆ. ಸಿನಿಮಾ ಸ್ಟೈಲ್ ನಲ್ಲಿ ಪೋಟೋ ತೆಗೆಸಿಕೊಂಡಿದ್ದಾರೆ. ಇವರ ಪ್ರೀತಿ ವಿಷಯ ಮನೆಯಲ್ಲಿ ಗೊತ್ತಾಗಿ, ಯುವತಿಗೆ ಮದುವೆ ಫಿಕ್ಸ್ ಮಾಡಿ, ನಿನ್ನೆ ಎಂಗೇಜ್ ಮೆಂಟ್ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಇದು ಗೊತ್ತಾಗಿ ಪ್ರೇಮಿಗಳಿಬ್ಬರು ಮನೆ ಬಿಟ್ಟು ಹೋಗಿದ್ದು, ಬೆಳಗ್ಗೆ ಯುವಕ ಶವವಾಗಿ ಪತ್ತೆ ಆಗಿದ್ದಾನೆ.
ಅಪ್ರಾಪ್ತ ಯುವತಿ ಹಾಗೂ ಹನುಮೇಶ ಒಂದೇ ಗ್ರಾಮದವರು. ಹನುಮೇಶ್ ಗ್ರಾಮದಲ್ಲಿ ಕಟ್ಟಡ ಕೆಲಸ ಮಾಡಿಕೊಂಡು ಜೀವನ ಮಾಡ್ತಿದ್ದ, ಇತ್ತ ಯುವತಿ ಕಳೆದ ವರ್ಷ SSLC ಮುಗಿಸಿದ್ದಾಳೆ. ಇಬ್ಬರೂ ತೀರಾ ಬಡ ಕುಟುಂಬದವ್ರು. ಆದ್ರೆ ಯುವತಿ ಹಾಗೂ ಹನುಮೇಶ್ ಮಧ್ಯೆ ಕಳೆದ ಮೂರು ವರ್ಷದಿಂದ ಪ್ರೀತಿ ಇತ್ತು. ಕಳೆದ ಆರು ತಿಂಗಳ ಹಿಂದೆ ಯುವತಿ ಪೋಷಕರಿಗೆ ವಿಷಯ ಗೊತ್ತಾದಾಗ, ಪೋಷಕರು ಹನುಮೇಶ್ ನನ್ನು ಕರೆದು ವಾರ್ನ್ ಮಾಡಿದ್ರು. ಅಂದಿನಿಂದ ಬೆಂಗಳೂರಿಗೆ ದುಡಿಯೋಕೆ ಹೋಗಿದ್ದ ಹನುಮೇಶ್ ಕಳೆದ ಒಂದು ತಿಂಗಳ ಹಿಂದೆ ವಾಪಸ್ ಬಂದಿದ್ದ. ಹನುಮೇಶ್ ಗ್ರಾಮಕ್ಕೆ ಬರುತ್ತಲೇ ಇಬ್ಬರ ಮದ್ಯೆ ಮತ್ತೆ ಸಲುಗೆ ಆರಂಭವಾಗಿದೆ. ಮತ್ತೆ ಮನೆಯವರಿಗೆ ವಿಷಯ ಗೊತ್ತಾಗಿ ಹುಡಗಿ ಮನೆಯವರು ಯುವಕನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಯುವತಿ ಮನೆಯವರು ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಕೊಲೆಯಾದ ಯುವಕನ ಮನೆಯವ್ರು ಆರೋಪಿಸಿದ್ದು, ಗಂಗಾವತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಪ್ರೀತಿ ಪ್ರೇಮ ಅಂತಾ ಸುತ್ತಾಡಿದ್ದ ಜೋಡಿಗೆ ಯುವತಿ ಪೋಷಕರೇ ವಿಲನ್ ಆಗಿದ್ದಾರೆ. ಯುವತಿ ಮನೆಯವರು ಕಾನೂನು ರೀತಿಯಲ್ಲಿ ಹೋರಾಟ ಮಾಡಿದ್ರೆ, ಯುವಕ ಜೈಲು ಸೇರುತ್ತಿದ್ದ. ಆದ್ರೆ, ಹುಡುಗಿ ಮನೆಯವರು ಕಾನೂನು ಬಿಟ್ಟು ನಡೆದು, ಯುವಕನನ್ನು ಕೊಲೆ ಮಾಡುವ ಮೂಲಕ ತಾವು ಜೈಲು ಸೇರುವ ಸ್ಥಿತಿ ತಂದುಕೊಂಡಿದ್ದಾರಾ.. ಪೊಲೀಸರ ತನಿಖೆ ನಂತರವೇ ಇದು ಕೊಲೆನಾ? ಇಲ್ಲ ಆತ್ಮಹತ್ಯೆನಾ? ಎಂಬ ಸತ್ಯ ಬಯಲಾಗಲಿದೆ.