ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ ‘ಕನ್ನಡತಿ’ ಸೀರಿಯಲ್‌ನ ಪ್ರಮುಖ ಪಾತ್ರ ರತ್ನಮಾಲಾ. ಮಾಲಾ ಗ್ರೂಪ್ ಆಫ್ ಕಂಪನೀಸ್‌ನ ಒಡತಿ. ತನ್ನ ಸ್ವಂತ ಶ್ರಮದಿಂದ ಆಕೆ ಈ ಕಂಪನಿಯನ್ನು ಕಟ್ಟಿ ಬೆಳೆಸಿರುತ್ತಾಳೆ. ಆದರೆ ಸದ್ಯಕ್ಕೆ ಅವಳ ಆರೋಗ್ಯ ಹದಗೆಟ್ಟಿದೆ. ಹರ್ಷ ರತ್ನಮಾಲಾ ಅವರನ್ನು ಕರೆಯೋದು ಅಮ್ಮಮ್ಮ ಅಂತ. ವೀಕ್ಷಕರು ಈ ಪಾತ್ರಕ್ಕೆ ಎಮೋಶನಲೀ ಎಷ್ಟು ಕನೆಕ್ಟ್ ಆಗಿದ್ದಾರೆ ಅಂದರೆ ಅವರೂ ಈ ಪಾತ್ರವನ್ನು ಅಮ್ಮಮ್ಮ ಅಂತಲೇ ಕರೆಯುತ್ತಾರೆ. ಈ ಹಿಂದೆ ಹರ್ಷನ ಮದುವೆ ಸಂದರ್ಭದಲ್ಲಿ, ಅದಕ್ಕೂ ಹಿಂದೆ ಸಾಕಷ್ಟು ಬಾರಿ ರತ್ನಮಾಲಾ ಆರೋಗ್ಯ ಕೈ ಕೊಟ್ಟಿತ್ತು. ಆದರೆ ಅಮೆರಿಕಾದಲ್ಲಿ ಅವರಿಗೆ ಚಿಕಿತ್ಸೆ ನೀಡಿದ ಬಳಿಕ ಅವರ ಆರೋಗ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಮರೆವಿನ ಕಾಯಿಲೆಯೂ ಆವರಿಸಿತ್ತು. ಇದೀಗ ಅವರಿಗೆ ಕ್ಯಾನ್ಸರ್ ಇದೆ. ಅಮ್ಮಮ್ಮ ಕೊನೆಯ ಹಂತವನ್ನೂ ತಲುಪಿದ್ದಾರೆ. ಅಮ್ಮಮ್ಮನ ಮರೆವಿನ ಖಾಯಿಲೆಯೂ ಪರಿಣಾಮ ಬೀರ್ತಿದೆ. ಪರಿಣಾಮ ಅಮ್ಮಮ್ಮ ಮೂರ್ಛೆ ಹೋಗಿದ್ದಾರೆ. ಮುಂದೆ ಈ ಪಾತ್ರದ ಕೊನೆ ಆಗಬಹುದಾ ಅನ್ನೋ ಆತಂಕ ಶುರುವಾಗಿದೆ.
ರತ್ನಮಾಲಾಗೆ ಮೊದಲಿಂದಲೂ ತನ್ನ ಮಗ ಹರ್ಷನ ಮೇಲೆ ನಂಬಿಕೆ ಇಲ್ಲ. ಇದಕ್ಕೆ ಕಾರಣ ಆತ ಮುಂಗೋಪಿ. ಈ ಮುಂಗೋಪಿಗೆ ತನ್ನ ಕಂಪನಿಯನ್ನು ನೀಡಿದರೆ ಆತ ಖಂಡಿತಾ ಅದನ್ನು ಸರಿಯಾಗಿ ನೋಡಿಕೊಳ್ಳೋದಿಲ್ಲ ಅಂತ ಅನುಭವಿ ಅಮ್ಮನಿಗೆ ಮನವರಿಕೆ ಆಗಿದೆ. ಅದಕ್ಕೇ ಅವರು ತಮ್ಮೆಲ್ಲ ಆಸ್ತಿಯನ್ನೂ ಮದುವೆಗೂ ಮೊದಲೇ ಸೊಸೆ ಭುವನೇಶ್ವರಿಯ ಹೆಸರಿಗೆ ಬರೆದಿದ್ದಾರೆ. ಭುವಿ ಅಂತ ಕರೆಸಿಕೊಳ್ಳುವ ಅಚ್ಚಕನ್ನಡದ ಹುಡುಗಿಗೆ ತಾಳ್ಮೆ, ಪ್ರತಿಯೊಂದು ಕೆಲಸವನ್ನೂ ಸಮತೋಲನದಲ್ಲಿ ನಡೆಸಿಕೊಂಡು ಹೋಗುವ ಚಾಕಚಕ್ಯತೆ ಎಲ್ಲವೂ ಇದೆ. ಇಂಥಾ ಭುವಿಯ ಬಗ್ಗೆ ರತ್ನಮಾಲಾಗೆ ಮೆಚ್ಚುಗೆ, ವಿಶ್ವಾಸ. ತನ್ನ ಅನಾರೋಗ್ಯದಿಂದ ರತ್ನಮ್ಮ ವಾರ್ಷಿಕೆ ಸಭೆಯಲ್ಲಿ ಭಾಗವಹಿಸಲು ಆಗದಿದ್ದರೂ ಭುವಿ ಅದನ್ನು ಕರೆಕ್ಟಾಗಿ ನಡೆಸಿದ್ದಾಳೆ. ಅಲ್ಲಿಗೆ ಅಮ್ಮಮ್ಮನ ಜಾಗಕ್ಕೆ ಉತ್ತರಾಧಿಕಾರಿ ರೆಡಿಯಾದ ಸೂಚನೆ ಸಿಕ್ಕಿದೆ.
ಈ ರತ್ನಮಾಲಾ ಪಾತ್ರ ಈ ಸೀರಿಯಲ್ ವೀಕ್ಷಕರಿಗೆ ಬಹಳ ಇಷ್ಟ. ಅವರು ಈ ಪಾತ್ರದ ಜೊತೆಗೆ ಎಮೋಶನಲ್ ಆಗಿ ಕನೆಕ್ಟ್ ಆಗಿದ್ದಾರೆ. ತಮ್ಮ ಅಮ್ಮನ ಸ್ಥಾನದಲ್ಲೇ ಅವರನ್ನಿಟ್ಟು ನೋಡುತ್ತಾರೆ. ಅವರ ಜೊತೆಗಿನ ಲೈವ್‌ನಲ್ಲಿ ಬಹಳ ಆತ್ಮೀಯತೆಯಿಂದ ಭಾಗವಹಿಸುತ್ತಾರೆ. ಈ ಹಿಂದೆ ರತ್ನಮಾಲಾ ಅಮೇರಿಕಾ ಪ್ರವಾಸ ಕಾರಣಕ್ಕೆ ಕೊಂಚ ವಿರಾಮ ತೆಗೆದುಕೊಂಡಿದ್ದಾಗ ಈ ಪಾತ್ರವನ್ನು ಆದಷ್ಟು ಬೇಗ ವಾಪಾಸ್ ಕರೆಸಬೇಕು ಅಂತ ಸೀರಿಯಲ್ ಟೀಮ್ ಮೇಲೆ ಸಾಕಷ್ಟು ಅಭಿಮಾನಿಗಳು ಒತ್ತಡ ಹಾಕಿದ್ದರು. ಇದೀಗ ಮತ್ತೆ ಆ ಪಾತ್ರವನ್ನು ನಿಲ್ಲಿಸಬೇಡಿ ಅಂತ ರಿಕ್ವೆಸ್ಟ್ ಮೇಲೆ ರಿಕ್ವೆಸ್ಟ್ ಬರ್ತಿದೆ.
ರತ್ನಮಾಲಾ ಅವರಿಲ್ಲದ ಕನ್ನಡತಿ ಸೀರಿಯಲ್ ಅನ್ನು ಕಲ್ಪಿಸಿಕೊಳ್ಳೋದೂ ಕಷ್ಟ. ದಯವಿಟ್ಟು ಕೊನೇವರೆಗೆ ಈ ಪಾತ್ರವನ್ನು ಉಳಿಸಿಕೊಳ್ಳಿ’ ಅಂತ ಒಬ್ಬರು ಕಮೆಂಟ್ ಮಾಡಿದರೆ, “ಹಂತ ಹಂತವಾಗಿ ಅಮ್ಮಮ್ಮನ್ನ ವೀಕ್ಷಕರಿಂದ ದೂರ ಮಾಡ್ತಿದ್ದೀರಾ. ನಿರ್ದೇಶಕರೇ ದಯವಿಟ್ಟು ಅಮ್ಮಮ್ಮ ಪಾತ್ರ ನಿಲ್ಲಿಸಬೇಡಿ. ಅವರ ಈ ಕಾಯಿಲೆ ನೋಡ್ತಿದ್ರೆ ತುಂಬಾ ಬೇಜಾರಾಗ್ತಿದೆ’ ಅಂತ ಇನ್ನೊಬ್ಬರು ಬರೆದಿದ್ದಾರೆ. ‘ಅಮ್ಮಮ್ಮ ಬೇಕು ಪ್ಲೀಸ್..’ ಅಂದಿದ್ದಾರೆ. ‘ಅವರ ಪಾತ್ರವನ್ನು ಕೊನೆಗೊಳಿಸಬೇಡಿ’ ಅಂತ ಸಾಕಷ್ಟು ಮಂದಿ ರಿಕ್ವೆಸ್ಟ್ ಮಾಡಿದ್ದಾರೆ.
ಸದ್ಯಕ್ಕೀಗ ಸೀರಿಯಲ್ ಹೋಗ್ತಿರೋ ರೀತಿ ನೋಡಿದ್ರೆ ಅಮ್ಮಮ್ಮ ಪಾತ್ರ ಕೊನೆ ಆಗ್ತಿರೋ ಸೂಚನೆ ಸಿಗುತ್ತಿದೆ. ಭುವಿ ಪಾತ್ರ ಹೆಚ್ಚೆಚ್ಚು ರೆಸ್ಪಾಸಿಬಲ್ ಆಗೋ ಥರ ಬಿಂಬಿಸಲಾಗ್ತಿದೆ. ಹೀಗಾಗಿ ಅಮ್ಮಮ್ಮ ಪಾತ್ರ ಕೊನೆಯಾಗೋ ಸಾಧ್ಯತೆ ಇನ್ನಷ್ಟು ಹೆಚ್ಚಿದೆ. ಕನ್ನಡತಿ ಸೀರಿಯಲ್ ಸೋಮವಾರದಿಂದ ಶುಕ್ರವಾರ ರಾತ್ರಿ ಏಳೂವರೆಗೆ ಪ್ರಸಾರವಾಗುತ್ತೆ. ಚಿತ್ಕಳಾ ಬಿರಾದಾರ್, ರಂಜನಿ ರಾಘವನ್, ಕಿರಣ್ ರಾಜ್ ಮೊದಲಾದವರು ನಟಿಸಿದ್ದಾರೆ.