ಶಿವಮೊಗ್ಗ: ದೇಶದ ಅಭಿವೃದ್ಧಿ ಕಾರ್ಯಗಳಲ್ಲಿ ಜನರ ಸಕ್ರಿಯ ಸಹಭಾಗಿತ್ವ ಅಗತ್ಯವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ K.S.ಈಶ್ವರಪ್ಪ ಹೇಳಿದ್ರು. ಶಿವಮೊಗ್ಗ ಸಮೀಪದ ಅಬ್ಬಲಗೆರೆ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಿಗೆ K.S.ಈಶ್ವರಪ್ಪ ಚಾಲನೆ ನೀಡಿದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಈಶ್ವರಪ್ಪ, ಜನರ ಭಾಗವಹಿಸುವಿಕೆಯಿಂದ ಮಾತ್ರ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಸಾಧ್ಯವಿದೆ. ಎಂದು ಹೇಳಿದರು.
ಇದೆ ಹಿನ್ನೆಲೆಯಲ್ಲಿ ಸರ್ಕಾರವು ಕೆಲವಾರು ಜನರ ಕೇಂದ್ರಿಕೃತವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದ್ರು. ಸರ್ಕಾರ ಜಾರಿಗೊಳಿಸುವ ಯೋಜನೆಗಳ ಅನುಷ್ಠಾನದಲ್ಲಿ ಜನರು ಕೂಡ ಜವಾಬ್ದಾರಿ ವಹಿಸಿಕೊಳ್ಳಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಲ್ಲಿನ ಜನರೇ ಗ್ರಾಮಕ್ಕೆ ಅವಶ್ಯಕವಾದ ಯೋಜನೆಗಳನ್ನು ಗುರುತಿಸಿ, ಅನುಷ್ಠಾನಗೊಳಿಸುವ ಕಾರ್ಯಕ್ರಮವನ್ನು ಇವತ್ತಿನಿಂದ ಆರಂಭಿಸಲಾಗಿದೆ ಎಂದ್ದಿದ್ದಾರೆ.
ಮಹಾತ್ಮ ಗಾಂಧಿ ಜಯಂತಿ ದಿನದಂದು ಗ್ರಾಮೀಣ ಭಾಗದ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತಿದೆ. ಮಹಿಳೆಯರ ಹಾಗೂ ದುರ್ಬಲ ವರ್ಗದವರ ರಕ್ಷಣೆಗಾಗಿ ದೌರ್ಜನ್ಯದಿಂದ ಮುಕ್ತಿ ಕಾರ್ಯಕ್ರಮದ ಅಡಿಯಲ್ಲಿ ಮುಂದಿನ ಹತ್ತು ತಿಂಗಳ ಕಾಲ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ತರಬೇತಿ ಮತ್ತು ಅರಿವು ಮೂಡಿಸುವ ಕಾರ್ಯ ನಡೆಸಲಾಗುವುದು.
ಗ್ರಾಮ ಪಂಚಾಯತ್ ಸದಸ್ಯರು, ವಿವಿಧ ಸ್ವಸಹಾಯ ಗುಂಪುಗಳ ಸದಸ್ಯೆಯರಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುವುದು ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ಸ್ವಾತಂತ್ರ್ಯದ ೭೫ನೇ ವರ್ಷಾಚರಣೆ ಅಂಗವಾಗಿ ರಾಜ್ಯದ ೭೫೦ ಗ್ರಾಮ ಪಂಚಾಯತಿಗಳಲ್ಲಿ ಅಮೃತ ಗ್ರಾಮ ಯೋಜನೆ ಅನುಷ್ಠಾನ ಗೊಳಿಸಲಾಗುತ್ತಿದೆ. ಜೊತೆಗೆ ಜಿಲ್ಲೆಯ ೩೨ ಗ್ರಾಮ ಪಂಚಾಯತಿಗಳಲ್ಲಿ ಈ ಯೋಜನೆ ಆರಂಭಿಸಲಾಗಿದೆ.
ಈ ಗ್ರಾಮ ಪಂಚಾಯತಿಗಳಲ್ಲಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರವು ೨೫ ಲಕ್ಷ ರೂಪಾಯಿ ಅನುದಾನ ಒದಗಿಸಲಿದೆ. ಪ್ರತಿಯೊಂದು ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಜಲಜೀವನ ಮಿಷನ್ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಸ್ವಚ್ಛ ಭಾರತ ಯೋಜನೆಯನ್ನು ಜಿಲ್ಲೆಯಾದ್ಯಂತ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿಯೊಂದು ಮನೆಗೆ ಶೌಚಾಲಯವನ್ನು ನಿರ್ಮಿಸಿ ಬಯಲು ಶೌಚಮುಕ್ತ ಗ್ರಾಮಗಳನ್ನು ರೂಪಿಸಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಒಂದೊಂದು ಕುಟುಂಬಕ್ಕೆ ವರ್ಷಕ್ಕೆ ೧೦೦ ದಿನಗಳ ಕೂಲಿ ಕೆಲಸ ಒದಗಿಸಲಾಗುತ್ತಿದೆ ಎಂದು ಈಶ್ವರಪ್ಪ ಹೇಳಿದರು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ ಅಧ್ಯಕ್ಷತೆ ವಹಿಸಿದ್ರು. ಜಿಲ್ಲಾಧಿಕಾರಿ K.B.ಶಿವಕುಮಾರ್, ಜಿ.ಪಂ. ಸಿಇಒ ಎಂ.ಎಲ್.ವೈಶಾಲಿ ಭಾಗವಹಿಸಿದ್ರು.