ಕೂಗು ನಿಮ್ಮದು ಧ್ವನಿ ನಮ್ಮದು

ಚಿತ್ರಸಾಹಿತಿ ಕೆ.ಕಲ್ಯಾಣ ದಾಂಪತ್ಯ ಪ್ರಕರಣದ ಎ1 ಆರೋಪಿ ಗಂಗಾ ಕುಲಕರ್ಣಿ ಆತ್ಮಹತ್ಯೆ

ಕೊಪ್ಪಳ: ಸಿನಿಸಾಹಿತಿ ಕೆ.ಕಲ್ಯಾಣ ಕೌಟುಂಬಿಕ ಕಲಹ ಪ್ರಕರಣದ ಎ1 ಆರೋಪಿ ಜ್ಯೋತಿ ಅಲಿಯಾಸ್ ಗಂಗಾ ಕುಲಕರ್ಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಲ್ಯಾಣ ಮನೆಯಲ್ಲಿ ಮನೆಗೆಲಸಕ್ಕೆಂದು ಸೇರಿಕೊಂಡಿದ್ದ ಗಂಗಾ ಕುಲಕರ್ಣಿ, ನಂತರ ಕಲ್ಯಾಣ ಕುಟುಂಬದ ಕಲಹಕ್ಕೆ ಕಾರಣವಾಗಿದ್ದಳು. ಈ ಕುರಿತು ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಗಂಗಾ ಕುಲಕರ್ಣಿ ಮೇಲೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಗಂಗಾ ಕುಲಕರ್ಣಿ ಎ1 ಆರೋಪಿಯಾಗಿದ್ದಳು. ಪ್ರಕರಣದ ಎ2 ಆರೋಪಿ ಶಿವಾನಂದ ವಾಲಿಯನ್ನ ಬಂಧಿಸಿ ಜೈಲಿಗಟ್ಟಿದ್ದ ಪೊಲೀಸರು ಆರೋಪಿ ಗಂಗಾ ಕುಲಕರ್ಣಿ ಗಾಗಿ ಹುಡುಕಾಟ ನಡೆಸಿದ್ದರು. ಕೆ.ಕಲ್ಯಾಣ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಗಂಗಾ ಕುಲಕರ್ಣಿ, ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಕಳೆದ ಹಲವು ಬಾರಿ ಕೋರ್ಟ್ ಗೆ ಗೈರಾಗಿದ್ದ ಗಂಗಾ ಕುಲಕರ್ಣಿ ಇವತ್ತು ಹಾಜರಾಗದಿದ್ದರೇ ಬಂಧನ ವಾರಂಟ್ ಹೊರಡಿಸುವುದಾಗಿ ಕೋರ್ಟ್ ಎಚ್ಚರಿಕೆ ನೀಡಿದ ಹಿನ್ನೆಲೆ ಕುಷ್ಟಗಿಗೆ ಆಗಮಿಸಿದ ಗಂಗಾ ಕುಲಕರ್ಣಿ ನ್ಯಾಯಾಲಯಕ್ಕೆ ಬರುವ ಮುಂಚೆಯೇ ವಿಷ ಸೇವನೆ ಮಾಡಿದ್ದಾಳೆ. ಮೊದಲೇ ವಿಷ ಸೇವಿಸಿದ ಗಂಗಾ, ಕೋರ್ಟ್ ಹಾಲ್ ಪ್ರವೇಶಿಸುತ್ತಿದ್ದಂತೆ ಕುಸಿದು ಬಿದ್ದಿದ್ದಾಳೆ. ಗಂಗಾಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವನಪ್ಪಿದ್ದಾಳೆ. ಇನ್ನು ಗಂಗಾ ಕುಲಕರ್ಣಿ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾಳೆ ಅಂತ ಹೇಳಲಾಗುತ್ತಿದ್ದು, ಕೆ.ಕಲ್ಯಾಣ ಪ್ರಕರಣದ ವಿಚಾರದಲ್ಲಿ ಬೆಳಗಾವಿ ಪೊಲೀಸರ ಕೈಗೆ ಸಿಗೊ ಮೊದಲೇ ಗಂಗಾ ಕುಲಕರ್ಣಿ ಆತ್ಮಹತ್ಯೆಗೆ ಶರಣಾಗಿದ್ದು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇನ್ನು ಗಂಗಾ ಕುಲಕರ್ಣಿ ಬರೆದಿಟ್ಡ ಡೆತ್ ನೋಟ್ ನಲ್ಲಿ ಏನಿದೆ ಅನ್ನೊದು ಕುತೂಹಲಕ್ಕೆ ಕಾರಣವಾಗಿದ್ದು ಕುಷ್ಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!