ಬೆಂಗಳೂರು: ಶಾಸಕ ಜನಾರ್ದನ ರೆಡ್ಡಿ ಮತ್ತು ಪತ್ನಿ ಲಕ್ಷ್ಮೀ ಅರುಣಾ ರೆಡ್ಡಿ ಅವರ ಆಸ್ತಿ ಜಪ್ತಿ ಮಾಡುವಂತೆ ಸಿಬಿಐ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. ಕ್ರಿಮಿನಲ್ ಕೇಸ್ ಮುಗಿಯುವವರೆಗೆ ಒಟ್ಟು 77 ಆಸ್ತಿಗಳನ್ನು ಜಪ್ತಿ ಮಾಡುವಂತೆ ಸಿಬಿಐ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. ಜನಾರ್ದನ ರೆಡ್ಡಿ ದಂಪತಿಗೆ ಸೇರಿದ ಒಟ್ಟು 124 ಆಸ್ತಿಗಳ ಜಪ್ತಿ ಕೋರಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದೀಗ ನ್ಯಾಯಾಲಯ ಭ್ರಷ್ಟಾಚಾರ ತಡೆ ಕಾಯ್ದೆ, ಕ್ರಿಮಿನಲ್ ಲಾ ತಿದ್ದುಪಡಿ ಕಾಯ್ದೆಯಡಿಯಲ್ಲಿ ಒಟ್ಟು 77 ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ.
ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಸರ್ಕಾರ ಅಸ್ತು
ಈ ಹಿಂದೆ ಕೂಡ 2023ರ ಜನವರಿ 12 ರಂದು ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಕರ್ನಾಟಕ ಗೃಹ ಇಲಾಖೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಹೈಕೋರ್ಟ್ ಚಾಟಿ ಬೀಸಿದ ಬಳಿಕ ಎಚ್ಚೆತ್ತುಕೊಂಡಿದ್ದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಜನವರಿ 12 ರಂದು ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಪ್ರತಿಕ್ರಿಯೆಗೆ ಅನುಮತಿ ನೀಡಿತ್ತು.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸಿಬಿಐ ತೆಲಂಗಾಣ, ಆಂಧ್ರಪ್ರದೇಶದಲ್ಲಿನ ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಅನುಮತಿ ಕೇಳಿತ್ತು. ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಕರ್ನಾಟಕ ಸರ್ಕಾರ ಅನುಮತಿ ನೀಡದ ಹಿನ್ನೆಲೆ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ 5 ತಿಂಗಳಾದರೂ ಸರ್ಕಾರ ಏಕೆ ನಿರ್ಧಾರ ಕೈಗೊಂಡಿಲ್ಲ. ನಿಮ್ಮ ದೃಷ್ಟಿಯಲ್ಲಿ ನಿರ್ಧಾರ ಕೈಗೊಳ್ಳದಿರುವುದೂ ಇಂದು ಕ್ರಮವಿರಬಹುದು. ಆದರೆ ಇದನ್ನು ಕೋರ್ಟ್ ಒಪ್ಪಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿತ್ತು. ಸರ್ಕಾರದ ಪ್ರತಿಕ್ರಿಯೆ ತಿಳಿಸಲು ಖಡಕ್ ಸೂಚನೆ ಕೊಟ್ಟಿತ್ತು. ಇದರ ಬೆನ್ನಲ್ಲೇ ರಾಜ್ಯ ಗೃಹ ಇಲಾಖೆ ಜನಾರ್ದನ್ ರೆಡ್ಡಿ ಆಸ್ತಿ ಜಪ್ತಿ ಪ್ರಕ್ರಿಯೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು.
ಆಸ್ತಿ ಜಪ್ತಿ ಮಾಡುತ್ತೇವೆ ಎನ್ನುವವರಿಗೆ ಹೆದರಲ್ಲ ಎಂದಿದ್ದ ರೆಡ್ಡಿ
ಜನವರಿ 11 ರಂದು ಅಷ್ಟೇ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ್ದ ರೆಡ್ಡಿ, ನನ್ನ ಆಸ್ತಿಪಾಸ್ತಿ ಜಪ್ತಿ ಮಾಡುತ್ತಾರೆ ಅಂತಾರೆ, ಅದಕ್ಕೆಲ್ಲ ನಾನು ಹೆದರಲ್ಲ. ಜೈಲಿನಲ್ಲಿ 4X5 ಅಡಿ ಜಾಗದಲ್ಲಿ ಇದ್ದವನು ನಾನು. ಯಾವೂದಕ್ಕೆ ಹೆದರುವುದಿಲ್ಲ. ನನ್ನ ಬಂಧನದ ಸಮಯದಲ್ಲಿ 1,200 ಕೋಟಿ ಆಸ್ತಿ ಜಪ್ತಿ ಮಾಡಿದ್ದರು. ಆದರೆ ಹೈಕೋರ್ಟ್ನಲ್ಲಿ ಗೆದ್ದಿದ್ದೆ, ಈಗ ‘ಸುಪ್ರೀಂ’ ಮೆಟ್ಟಿಲೇರಿದ್ದಾರೆ. ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ನನ್ನ ಸ್ಪೀಡ್ ಜಾಸ್ತಿಯಾಗಿದೆ. 1,200 ಕೋಟಿ ಇದ್ದ ಆಸ್ತಿ 4,000 ಕೋಟಿಯಾಗಿದೆ. ಹನುಮ ಹುಟ್ಟಿದ ನಾಡಿಗೆ ನಾನು ಬಂದಿದ್ದೇನೆ, ನನಗೆ ಲಕ್ಷ್ಮೀ ಕೃಪೆ ಇದೆ. ಇನ್ಮುಂದೆ ನಾನು ಕಣ್ಣೀರು ಹಾಕಲ್ಲ. ನನ್ನ ಕಣ್ಣೀರು 12 ವರ್ಷದ ಹಿಂದೆಯೇ ಮುಗಿದಿದೆ ಎಂದು ಹೇಳಿದ್ದರು.