ಉಡುಪಿ: ಬಿಜೆಪಿಯ ಇತಿಹಾಸದಲ್ಲಿ ಉಡುಪಿ ಜಿಲ್ಲೆಗೆ ಪ್ರಮುಖ ಸ್ಥಾನವಿದೆ. ಇಂದು ಕೃಷ್ಣ ಮಠಕ್ಕೆ ಭೇಟಿ ನೀಡಿ ನನ್ನ ಜೀವನ ಪಾವನವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. ಜಿಲ್ಲೆಯಲ್ಲಿ ಆಯೋಜಿಸಿದ್ದ ಬಿಜೆಪಿ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿ, 1968ರಲ್ಲಿ ಉಡುಪಿ ಮುನ್ಸಿಪಾಲಿಟಿಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಈ ಮೂಲಕ ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಉಡುಪಿ ಆಗಿತ್ತು. ತನ್ನ ವಿಚಾರಧಾರೆ ಮೂಲಕ ಮುನ್ನಡೆಯುತ್ತಿರುವ ಏಕೈಕ ಪಕ್ಷ ಬಿಜೆಪಿ. ದೇಶದಲ್ಲಿ ತನ್ನ ವಿಚಾರಧಾರೆಯಲ್ಲಿ ನಂಬಿಕೆ ಇಟ್ಟು ದಾಪುಗಾಲಿಡುತ್ತಿದೆ. ಇತರ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಗೆ ಮಾತ್ರ ವಿಚಾರಧಾರೆ ಇದೆ. ಮಾಸ್ ಪಾಲೋವರ್ಸ್ಗಳಿದ್ದಾರೆ ಎಂದು ಹೇಳಿದರು.
ಇದು ದೇಶದ ನಾಯಕತ್ವದ ಶಕ್ತಿ
ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲಿ ಮೋದಿ ನೇತೃತ್ವದಲ್ಲಿ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ. ಡಬಲ್ ಡೋಸ್ ವ್ಯಾಕ್ಸಿನ್ ನೀಡಿದ್ದು ಮಾತ್ರವಲ್ಲದೇ ಬೂಸ್ಟರ್ ಡೋಸ್ ಕೂಡ ನೀಡಿದ ವಿಶ್ವದ ಏಕೈಕ ದೇಶ ಭಾರತ. ಉಕ್ರೆನ್ ಯುದ್ದ ಸಂದರ್ಭದಲ್ಲಿ ಭಾರತ ದಿಟ್ಟತನ ಮೆರೆದಿದೆ. ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಪುಟಿನ್ ಅವರೊಂದಿಗೆ ಮಾತನಾಡಿ ಭಾರತದ ಮಕ್ಕಳನ್ನು ಕರೆತಂದಿದ್ದಾರೆ. ವಿಶ್ವದಲ್ಲಿ ಭಾರತ ಮಾತ್ರ ಯುದ್ದದ ನಡುವೆ ತಮ್ಮ ಮಕ್ಕಳನ್ನು ತರಲು ಯಶಸ್ವಿಯಾಗಿದೆ. ಇದು ದೇಶದ ನಾಯಕತ್ವದ ಶಕ್ತಿ ಆಗಿದೆ ಎಂದು ಬಣ್ಣಿಸಿದರು.
ಪಕ್ಷಗಳ ನಡುವಿನ ವ್ಯತ್ಯಾಸ ಹೇಳಿದ ನಡ್ಡಾ
ಕಾಂಗ್ರಸ್, ಜೆಡಿಎಸ್ ಶಿವಸೇನೆ ಸೇರಿದಂತೆ ಇತರ ಪಕ್ಷ ಪರಿವಾರದ ಪಾರ್ಟಿಗಳಾಗಿವೆ. ಕಾಂಗ್ರೆಸ್ನಲ್ಲಿ ತಾಯಿ, ಮಗ, ಮಗಳು ಮತ್ತು ಅಳಿಯಂದೇ ಪಕ್ಷವಾಗಿದೆ. ಜೆಡಿಎಸ್ ಕೂಡ ಕೇವಲ ಒಂದು ಕುಟುಂಬದ ಪಾರ್ಟಿಯಾಗಿದೆ. ಆದರೆ ಬಿಜೆಪಿಗೆ ಪಾರ್ಟಿಯೇ ಪರಿವಾರವಾಗಿದೆ. ಇದು ನಮ್ಮ ಮತ್ತು ಬೇರೆ ಪಕ್ಷಗಳಿಗಿರುವ ವ್ಯತ್ಯಾಸ ಎಂದು ಜೆ.ಪಿ.ನಡ್ಡಾ ವಾಗ್ದಾಳಿ ಮಾಡಿದರು.
ನಡ್ಡಾ ಬಳಿ ಹಲವು ಬೇಡಿಕೆ ಇಟ್ಟ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಕರಾವಳಿ ಭಾಗದ ಸಾಧು ಸಂತರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಬಳಿ ಹಲವು ಬೇಡಿಕೆ ಮುಂದಿಟ್ಟಿದ್ದೇವೆ. ತುಳು ಭಾಷೆಗೆ ಸೂಕ್ತ ಮಾನ್ಯತೆ ನೀಡಬೇಕು. ಸನಾತನ ಧರ್ಮ, ಸಂಸ್ಕೃತಿ ಸದ್ವಿಚಾರಗಳಿಗೆ ಸದಾ ಮನ್ನಣೆ ನೀಡಬೇಕು. ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲು ಕ್ರಮಕೈಗೊಳ್ಳಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು. ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಭಾಗದ ಸಾಂಸ್ಕೃತಿಕ, ಪ್ರಾಕೃತಿಕ, ಧಾರ್ಮಿಕತೆಗೆ ಹಾನಿಯಾಗಬಾರದು. ಕರಾವಳಿ ಯುವಕರು ವಲಸೆ ಹೋಗುತ್ತಿರುವುದನ್ನು ತಪ್ಪಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣವಿದೆ ಎಂದ ನಳಿನ್ ಕುಮಾರ್
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಮಾತನಾಡಿ, ಕಾಂಗ್ರೆಸ್ ನಾಯಕರು ಮತ್ತೆ ನಿರುದ್ಯೋಗಿಗಳಾಗ್ತಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣವಿದೆ. ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಸಿಎಂ ಕುರ್ಚಿ ಕನಸು ಕಾಣುವ ಕಾಂಗ್ರೆಸ್ಸಿಗರು ನಿರುದ್ಯೋಗಿಗಳಾಗ್ತಾರೆ ಎಂದು ಕಿಡಿಕಾರಿದರು.