ಕೂಗು ನಿಮ್ಮದು ಧ್ವನಿ ನಮ್ಮದು

ಕೊವಿಡ್ ಲಸಿಕೆ ಸಿಗುತ್ತದೆ ಎಂದು ಜನರಿಗೆ ಸುಳ್ಳು ಭರವಸೆ ನೀಡುವ ಬದಲು ವಾಸ್ತವಾಂಶ ಒಪ್ಪಿಕೊಳ್ಳಿ: ರಾಜ್ಯ ಹೈಕೋರ್ಟ್

ಬೆಂಗಳೂರು: ಕೋವಿಡ್-19 ಲಸಿಕೆ ಅಭಿಯಾನದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ  ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಲಸಿಕೆ ನೀತಿಯಡಿ 18 ರಿಂದ 44 ವರ್ಷ ವಯೋಮಿತಿಯ ಜನರು ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಪಡೆಯಲು 1,000 ರೂಪಾಯಿಗೂ ಅಧಿಕ ಮೊತ್ತ ಪಾವತಿಸಬೇಕಾಗುತ್ತಿದೆ. ಬಡಜನರು ಇಷ್ಟು ಮೊತ್ತ ಪಾವತಿಸಲು ಸಾಧ್ಯವಾಗದೆ ಇರುವುದರಿಂದ ಇದು ಸಂವಿಧಾನದ 14ನೇ ವಿಧಿ ಹಾಗೂ 21ನೇ ವಿಧಿಗಳನ್ನು ಉಲ್ಲಂಘಿಸಿದಂತೆ ಆಗಲಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ರಾಜ್ಯ ಸರ್ಕಾರ ಈಗ ಎರಡನೆಯ ಡೋಸ್ ಲಸಿಕೆ ಮಾತ್ರ ನೀಡಲು ನಿರ್ಧರಿಸಿದ್ದರೂ, 18 ರಿಂದ 44 ವರ್ಷ ವಯಸ್ಸಿನವರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಅವಕಾಶವಿದೆ ಎಂಬ ಮಾಹಿತಿ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

18 ರಿಂದ 44 ವರ್ಷ ವಯೋಮಿತಿಯ ಜನರಿಗೆ ಸರ್ಕಾರದಿಂದ ಮೊದಲ ಡೋಸ್ ಲಸಿಕೆ ಸಿಗುತ್ತಿಲ್ಲ. ಆದರೆ ಅವರು ಖಾಸಗಿ ಸಂಸ್ಥೆಗಳಿಂದ ಅವುಗಳನ್ನು ಪಡೆದುಕೊಳ್ಳಬಹುದಾಗಿದೆ. ಜನರು ಹಣ ತೆತ್ತು, ಡೋಸ್ ಪಡೆದುಕೊಳ್ಳಬಹುದು. ಕೇಂದ್ರ ಸರ್ಕಾರ ಇದರ ಬಗ್ಗೆ ಮೌನ ವಹಿಸಬಹುದೇ? ಎಂದು ಹೈ ಪೀಠ ಪ್ರಶ್ನಿಸಿದೆ. ಸಾಕಷ್ಟು ಹಣವಿಲ್ಲದ ವ್ಯಕ್ತಿ ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಪಡೆಯಲು ಸಾಧ್ಯವಾಗದೆ ಇರಬಹುದು. ಇದು ಸಮಾನತೆಯ ಹಕ್ಕು ಮತ್ತು ಜೀವಿಸುವ ಹಕ್ಕಿನ ಉಲ್ಲಂಘನೆಯಾಗಬಹುದು ಎಂದು ನ್ಯಾಯಾಲಯ ಹೇಳಿದೆ.

ಕೊವಿಡ್ ಲಸಿಕೆ ಸಿಗುತ್ತದೆ ಎಂದು ಜನರಿಗೆ ಸುಳ್ಳು ಭರವಸೆ ನೀಡುವ ಬದಲು ವಾಸ್ತವಾಂಶ ಒಪ್ಪಿಕೊಳ್ಳಿ ಎಂದು ಸರ್ಕಾರವನ್ನು ರಾಜ್ಯ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಕೊಳೆಗೇರಿಗಳಲ್ಲಿ ಮತ್ತು ಇತರೆ ಪ್ರದೇಶಗಳಲ್ಲಿ ಇರುವ ಜನರಿಗೆ ಲಸಿಕೆ ಅಗತ್ಯವಿದೆ. ಆದರೆ ಅವರು ಲಸಿಕೆಗಾಗಿ 1,000 ರೂಪಾಯಿ ಭರಿಸಲಾರರು. ಆಗ ಅಂತಹ ವ್ಯಕ್ತಿಗೆ ಲಸಿಕೆ ಸಿಗುವುದಿಲ್ಲ. ಆದರೆ ಜನಸಂದಣಿಯಿಲ್ಲಿ ಇಲ್ಲದ  ಪ್ರದೇಶಗಳಲ್ಲಿ ವಾಸಿಸುವ ವ್ಯಕ್ತಿ ಮೊದಲ ಡೋಸ್ ಪಡೆದುಕೊಳ್ಳುವಷ್ಟು ಸಾಮರ್ಥ್ಯ ಹೊಂದಿರುತ್ತಾನೆ. ಈ ಸಂಬಂಧ ನಾವು ಅದನ್ನು ಆರ್ಟಿಕಲ್ 14 ಮತ್ತು 21ರಲ್ಲಿ ಇರಿಸುತ್ತೇವೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

error: Content is protected !!