ಹೊಸಪೇಟೆ: ಪರ ಪುರುಷನೊಂದಿಗೆ ಪತ್ನಿಯ ಅನೈತಿಕ ಸಂಭಂದ ಶಂಕೆ ಹಿನ್ನಲೆ ಪತಿಯೊಬ್ಬ ತನ್ನ ಹೆಂಡತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾನೆ. ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ ಕೋಟೆ ಪ್ರದೇಶ ಬಳಿಯಲ್ಲಿ ಈ ಘಟನೆ ನಡೆದಿದೆ. ಹೇಮಾವತಿ ಅಲಿಯಾಸ್ ಲಕ್ಷ್ಮಿ (30) ಕೊಲೆಯಾದ ಮಹಿಳೆ. ಕೊಲೆ ಆರೋಪಿ ಕೊಲೆಯಾದ ಮಹಿಳೆಯ ಗಂಡ ದುರುಗಪ್ಪನನ್ನು ಕಂಪ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಷ್ಟೆ ಅಲ್ಲದೇ ತನ್ನ ಪತ್ನಿಯ ಜೊತೆ ಅಕ್ರಮ ಸಂಭಂದ ಹೊಂದಿದ್ದ ವ್ಯಕ್ತಿಯ ಮನೆಗೆ ತೆರಳಿ ಗಂಡ ದುರಗಪ್ಪ ಆತನ ಮೇಲೆ ಕೂಡ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ದಾಳಿಯಿಂದ ಹಲ್ಲೆಗೊಳಗಾದ ಕಾಯಿಗಡ್ಡೆ ರಾಜ ಎಂಬುವ ವ್ಯಕ್ತಿ ಸಧ್ಯ ಗಂಗಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಹಂಪಿ ಡಿವೈಎಸ್ಪಿ ಎಸ್.ಎಸ್.ಕಾಶಿ, ಸಿಪಿಐ ಸುರೇಶ್ ತಳವಾರ್, ಪಿಎಸ್ಐ ಮೌನೇಶ್, ರಾಥೋಡ್ ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.