ಚಾಮರಾಜನಗರ: ಅಕ್ರಮವಾಗಿ ಕರುಗಳನ್ನು ಸಾಗಾಟ ಮಾಡಲಾಗುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಒಟ್ಟು 16 ಕರುಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಉತ್ತಂಬಳ್ಳಿ ಗ್ರಾಮದಲ್ಲಿ ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಕರುಗಳನ್ನು ಗ್ರಾಮಾಂತರ ಪೊಲೀಸರು ರಕ್ಷಣೆ ಮಾಡಿದ್ದಾರೆ. ಅಕ್ರಮವಾಗಿ ತಮಿಳುನಾಡಿಗೆ ಸಾಗಾಣಿಕೆ ಬಗ್ಗೆ ಮಾಹಿತಿ ಪಡೆದ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವಿ.ಸಿ.ಅಶೋಕ್, ತಕ್ಷಣ ಧಾವಿಸಿ ವಾಹನ ಅಡ್ಡಗಟ್ಟಿ ವಿಚಾರಿಸಿದ್ದಾರೆ. ಈ ವೇಳೆ ಅಕ್ರಮ ಕಂಡುಬಂದಿದ್ದು ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ವಶಪಡಿಸಿಕೊಂಡ ಕರುಗಳನ್ನು ಮೂಗೂರು ಗ್ರಾಮದಲ್ಲಿರುವ ಪಿಂಜ್ರಾಪೋಲ್ ಗೆ ಕಳುಹಿಸಲಾಗುವುದು ಎಂದು ಪಿಎಸ್ಐ ವಿಸಿಅಶೋಕ್ ತಿಳಿಸಿದ್ದಾರೆ. ದಾಳಿಯಲ್ಲಿ ಮುಖ್ಯಪೇದೆಗಳಾದ ನಾಗರಾಜು, ರಂಗಸ್ವಾಮಿ ಪೊಲೀಸ್ ಪೇದೆ ವೆಂಕಟೇಶ್ ಪಾಲ್ಗೊಂಡಿದ್ದರು.