ರಾಯಚೂರು: ನಾನು ಜೆಡಿಎಸ್‌ನಲ್ಲಿದ್ದರೂ ಪಕ್ಷದಿಂದ ಒಂದು ರೂಪಾಯಿ ತಗೋತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ. ರಾಯಚೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಬೇಡಿದವನಲ್ಲದೇ ಬಸವನಾದನಯ್ಯ’ ಎನ್ನುವಂತಾಗಿದೆ ನನ್ನ ಪರಿಸ್ಥಿತಿ. ಕಾರು ನನ್ನದು, ಡಿಸೇಲ್ ನನ್ನದು. ಊಟ ದಾಸೋಹದಲ್ಲಿ ನಡೆಯುತ್ತದೆ. ಆದರೆ ಪಕ್ಷದಿಂದ ಒಂದು ರೂಪಾಯಿಯೂ ತೆಗೆದುಕೊಳ್ಳುವುದಿಲ್ಲ. ನನಗೆ ಕುಡಿಯುವ ಅಭ್ಯಾಸವಿಲ್ಲ, ನಶೆ ಹಾಕ್ತಿದ್ದೆ ಅದನ್ನೂ ಈಗ ಬಿಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ಮೂರು ತಿಂಗಳು ಕಾಯಿರಿ: 2023ರ ಚುನಾವಣೆಯ ನಂತರ ರಾಜ್ಯದಲ್ಲಿ ಜೆಡಿಎಸ್ ಪಕ್ಷ ನಂಬರ್ ಒಂದು ಸ್ಥಾನಕ್ಕೆ ಬರಲಿದೆ. ಬಿಜೆಪಿ ಎರಡು ಹಾಗೂ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿರಲಿದೆ. ಇನ್ನು ಮೂರು ತಿಂಗಳಲ್ಲಿ ಹಲವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದರು. ಕಾಂಗ್ರೆಸ್ ಒಡೆದ ಮನೆಯಾಗಿದೆ ಬಿಜೆಪಿ 40, ಕಾಂಗ್ರೆಸ್ 20 ಪರ್ಸೆಂಟ್ ಕಮಿಷನ್‌ಗಾಗಿ ಜಗಳವಾಡುತ್ತಿವೆ. ಈಗಾಗಲೇ ಕಾಂಗ್ರೆಸ್, ಬಿಜೆಪಿಯ ದುರಾಡಳಿತದಿಂದಾಗಿ ಜನ ಬೇಸತ್ತಿದ್ದು, ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಬಹುಮತ ನೀಡಿದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ನಾಲ್ಕು ಲಕ್ಷ ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ ಪೂರ್ಣಗೊಳಿಸುವ ಸಂಕಲ್ಪ ಮಾಡಿದ್ದಾರೆ. ಕೊಟ್ಟ ಮಾತಿನಂತೆ ಕುಮಾರಸ್ವಾಮಿ ಕಡಿಮೆ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದು ಹೊಗಳಿದರು.