ಬೆಳಗಾವಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನವೆಂಬರ್ 11ರಂದು ಬೆಳಗಾವಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾನು ಆಡಿದ ಮಾತಿನಿಂದ ಬೆಳಗಾವಿಯ ಪತ್ರಕರ್ತ ಸಹೋದರರಿಗೆ ನೋವಾಗಿದ್ದರೆ ನಾನು ವಿಷಾಧಿಸುತ್ತೇನೆ. ಅಲ್ಲಿ ನಾನು ಸಕಾರಾತ್ಮಕ ದೃಷ್ಟಿಕೋನದಿಂದ ಮಾತನಾಡಿದ್ದೇನೆಯೇ ಹೊರತು ಬೇರೆ ಯಾವುದೇ ಉದ್ದೇಶದಿಂದಲ್ಲ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಪತ್ರಕರ್ತರು ರಾಜಕೀಯಕ್ಕಿಂತ ಅಭಿವೃದ್ಧಿ ವಿಷಯದ ಮೇಲೆ ಹೆಚ್ಚಿನ ಬೆಳಕು ಚೆಲ್ಲಬೇಕು ಎನ್ನುವ ಅರ್ಥದಲ್ಲಿ ನಾನು ಮಾತನಾಡಿದ್ದೇನೆ. ಆ ಕಾರ್ಯಕ್ರಮ ಪತ್ರಕರ್ತರ ಕುಟುಂಬದೊಳಗಿನ ಕಾರ್ಯಕ್ರಮ, ಅಲ್ಲಿ ಸಾರ್ವಜನಿಕರು ಇರಲಿಲ್ಲ. ನಾನು ನಿಮ್ಮೆಲ್ಲರ ಸಹೋದರಿ ಎನ್ನುವ ಭಾವನೆಯಿಂದ ಮಾತನಾಡಿದ್ದೇನೆ. ಇದರಿಂದ ಪತ್ರಕರ್ತ ಸಹೋದರರ ಮನಸ್ಸಿಗೆ ನೋವುಂಟಾಗಬಾರದಿತ್ತು. ಹಾಗಾಗಿ ಯಾರೂ ಅನ್ಯಥಾ ಭಾವಿಸಬಾರದು ಎಂದು ಕೋರಿದ್ದಾರೆ.
ಯಾರೊಂದಿಗೂ ಜಿದ್ದಿಗೆ ಬಿದ್ದು ರಾಜಕಾರಣ ಮಾಡುವ ಮನೋಭಾವ ನನ್ನದಲ್ಲ. ಬೆಳಗಾವಿ ಪತ್ರಕರ್ತ ಸಹೋದರರೊಂದಿಗೆ ಮೊದಲಿನಿಂದಲೂ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ. ನನ್ನ ಈವರೆಗಿನ ಬೆಳವಣಿಗೆಯಲ್ಲಿ ಪತ್ರಕರ್ತ ಸಹೋದರರ ಸಹಕಾರ ಬಹಳ ದೊಡ್ಡದಿದೆ. ನಾನು ಯಾವತ್ತೂ ಪತ್ರಕರ್ತ ಸಹೋದರರನ್ನು ಗೌರವಭಾವದಿಂದಲೇ ಕಾಣುತ್ತೇನೆ. ಹಾಗಾಗಿ ಯಾವತ್ತೂ ನಾನು ಪತ್ರಕರ್ತರ ಮನಸ್ಸಿಗೆ ನೋವುಂಟು ಮಾಡುವ ಪ್ರಶ್ನೆಯೇ ಇಲ್ಲ. ಈ ವಿಷಯವನ್ನು ದೀರ್ಘಕ್ಕೆ ಕೊಂಡೊಯ್ಯುವ ಬದಲು ಇಷ್ಟಕ್ಕೇ ಮುಗಿಸೋಣ. ಸಧ್ಯ ನಾನು ಬೆಂಗಳೂರಿನಲ್ಲಿದ್ದೇನೆ. ಮುಂದಿನ ದಿನಗಳಲ್ಲಿ ಎಂದಿನಂತೆ ಪರಸ್ಪರ ಸಹಕಾರದಿಂದ ಜಿಲ್ಲೆಯಲ್ಲಿ, ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡೋಣ ಎಂದು ಅವರು ಆಶಿಸಿದ್ದಾರೆ.