ಹುಕ್ಕೇರಿ: ಹುಕ್ಕೇರಿ ಪುರಸಭೆಗೆ ಇಂದು ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಿತು. ಈ ವೇಳೆ ಹುಕ್ಕೇರಿ ಪುರಸಭೆಯ ನೂತನ ಅಧ್ಯಕ್ಷರಾಗಿ ಭಾರತೀಯ ಜನತಾ ಪಕ್ಷದ ಅಣಪ್ಪಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಶಿವಲಿಂಗ ಗಂಧ ಅವರನ್ನು ಚಿಕ್ಕೋಡಿ ಲೋಕಸಭೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸ್ಥಳಿಯ ಶಾಸಕ ಮಾಜಿ ಸಚಿವ ಉಮೇಶ ಕತ್ತಿ ನೇತೃತ್ವದಲ್ಲಿ ಅವಿರೋಧವಾಗಿ ಆಯ್ಕೆ ಮಾಡಿ, ಸತ್ಕರಿಸಿ, ಅಭಿನಂದನೆ ಸಲ್ಲಿಸಿದರು.
ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದಾಗ ಮಾತ್ರ ಪ್ರಜೆಗಳಿಗೆ ನಾವು ಕೊಟ್ಟ ಭರವಸೆ ಈಡೇರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹುಕ್ಕೇರಿ ಪುರಸಭಾ ವ್ಯಾಪ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಡಬೇಕು. ಪ್ರಜೆಗಳ ಏಳಿಗೆಗಾಗಿ ಏಕತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಂಸದ ಅಣ್ಣಾಸಾಹೇಬ್ ಜೊಲ್ಲೆ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಉಮೇಶ ಕತ್ತಿ, ತಹಶೀಲ್ದಾರ ಸಂತೋಷ ಗುರಾಣಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಜಾಧವ, ಪುರಸಭೆಯ ಸದಸ್ಯರು, ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.