ಕೂಗು ನಿಮ್ಮದು ಧ್ವನಿ ನಮ್ಮದು

ಮೂರು ವೀರಗಲ್ಲು ಸಂಶೋಧನೆ; ಹೊರನಾಡು ಇತಿಹಾಸದ ಮೇಲೆ ಹೊಸ ಬೆಳಕು

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಅನ್ನಪೂರ್ಣೇಶ್ವರಿ ಅಮ್ಮನವರ ಸುಕ್ಷೇತ್ರ ಹೊರನಾಡು ಗ್ರಾಮದಲ್ಲಿ ಮೂರು ವೀರಗಲ್ಲು ಮತ್ತು ಒಂದು ಒಕ್ಕೈ ಮಹಾಸತಿ ಕಲ್ಲು ಸಹಿತ ಅಪ್ರಕಟಿತ ನಾಲ್ಕು ಐತಿಹಾಸಿಕ ಸ್ಮಾರಕಗಳನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧಕ ಹೆಚ್.ಆರ್.ಪಾಂಡುರಂಗ ಸಂಶೋಧನೆ ಮಾಡಿದ್ದು, ಹೊರನಾಡು ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದ್ದಾರೆ.


ಮಹಿಳೆಯರ ತ್ಯಾಗದ ಗುಣ ಅನಾವರಣ:

ಹದಿಮೂರನೇ ಶತಮಾನದ ಸಾಂತರರು ಮತ್ತು ಭೈರವರಸರ ಕಾಲದ ಈ ನಾಲ್ಕು ಐತಿಹಾಸಿಕ ಸ್ಮಾರಕಗಳ ಶೋಧನೆಯಿಂದಾಗಿ ಹೊರನಾಡು ಪ್ರಜೆಗಳ ನಾಡಪ್ರೇಮ, ಪರಾಕ್ರಮ ಹಾಗೂ ಮಹಿಳೆಯರ ತ್ಯಾಗದ ಗುಣಗಳ ಅನಾವರಣವಾಗಿದೆ ಎಂದು ಅವರು ತಿಳಿಸಿದ್ದಾರೆ. ಹೊರನಾಡು ದೊಡ್ಡಮನೆ ರಾಜೇಂದ್ರ ಹೆಗ್ಗಡೆಯವರ ಮಲೆನಾಡು ಮಳಿಗೆಯಲ್ಲಿ ನಿಂತಿರುವ ಬಿಳಿಕಣಶಿಲೆಯ ಗಜಲಕ್ಷ್ಮೀ ಸಹಿತ ತುರು ಕಾಳಗದ ವಿಶೇಷ ವೀರಗಲ್ಲು ಐದು ಫಲಕಗಳನ್ನು ಹೊಂದಿದೆ. ಇದರಲ್ಲಿ ತುರುಗಳ್ಳರು ಹಾಗೂ ತುರುಗಳ (ಹಸುಗಳ) ಚಿತ್ರಣ, ವೀರನೊಬ್ಬ ಪಲ್ಲಕ್ಕಿ ಯಲ್ಲಿ ಕುಳಿತು ಯುದ್ದ ರಂಗಕ್ಕೆ ಹೋಗುತ್ತಿರುವ ಮತ್ತು ಹೋರಾಟದ ಚಿತ್ರಣ, ಹಸುಗಳನ್ನು ರಕ್ಷಿಸಲು ಹೋರಾಡಿ ಮಡಿದ ವೀರನನ್ನು ಅಪ್ಸರೆಯರು ಸ್ವರ್ಗಕ್ಕೆ ಕರೆದೊಯ್ಯುತ್ತಿರುವ ಚಿತ್ರಣ, ತನ್ನ ಪತ್ನಿಯೊಂದಿಗೆ ದೇವತೆಗಳ ಜೊತೆ ಸ್ವರ್ಗದಲ್ಲಿ ಕುಳಿತ ಚಿತ್ರಣ, ಅಪರೂಪದ ಗಜಲಕ್ಷ್ಮಿ ಹಾಗೂ ಸೂರ್ಯ-ಚಂದ್ರರ ಚಿತ್ರಣವಿದೆ.


ಹದಿಮೂರನೇ ಶರಮಾನದ ಸಾಂತರರ ಕಾಲ ವೀರಗಲ್ಲು:

ಹದಿಮೂರನೇ ಶತಮಾನದ ಕಳಸ ಸಾಂತರರ ಕಾಲದಲ್ಲಿ ತುರುಕಾಳಗದಲ್ಲಿ ಮಡಿದ ಹೊರನಾಡಿನ ವೀರನೊಬ್ಬನ ಜೈನ ಸಂಪ್ರದಾಯದ ವಿಶಿಷ್ಟ ವೀರಗಲ್ಲು ಎಂದು ತಿಳಿಸಿದ್ದಾರೆ.ಹೆಚ್.ಡಿ. ಜ್ವಾಲನಯ್ಯ ಅವರ ಮನೆ ಮುಂದಿರುವ ಬಿಳಿ ಕಣಶಿಲೆಯ ಈ ಭಗ್ನ ವೀರಗಲ್ಲಿನಲ್ಲಿ ಅಶ್ವಯೋಧರು ಹಾಗೂ ಖಡ್ಗ ಯೋಧರ ಹೋರಾಟದ ಚಿತ್ರಣ, ವೀರನೊಬ್ಬ ಪಲ್ಲಕ್ಕಿಯಲ್ಲಿ ಕುಳಿತು ಯುದ್ದ ರಂಗಕ್ಕೆ ತೆರಳುತ್ತಿರುವ ಅಸ್ಪಷ್ಟ ಚಿತ್ರಣವಿದೆ. ಇದು ಭೈರವರಸರ ಕಾಲದ ವೀರಗಲ್ಲಾಗಿದೆ. ಹೊರನಾಡಿನ ಅತ್ತಿಗೇರಿಯ ನಾಗೇಂದ್ರ ಪುಟ್ಟಯ್ಯ ಅವರ ಕಾಫಿ ತೋಟದಲ್ಲಿ ಉತ್ತರಾಭಿಮುಖವಾಗಿ ನಿಂತಿರುವ ಬಿಳಿ ಕಣಶಿಲೆಯ ವೀರಗಲ್ಲಿನಲ್ಲಿ ಯುದ್ಧದ ಚಿತ್ರಣ, ಕಾಳಗದಲ್ಲಿ ಮಡಿದ ವೀರನನ್ನು ಅಪ್ಸರೆಯರು ಸುರಲೋಕಕ್ಕೆ ಕರೆದೊಯ್ಯುತ್ತಿರುವ ಚಿತ್ರಣಗಳಿದ್ದು, ಇದೂ ಸಹ ಭೈರವರಸರ ಕಾಲದ ಹೊರನಾಡಿನ ವೀರನೊಬ್ಬನ ವೀರಮರಣದ ಸ್ಮಾರಕವಾಗಿದೆ.

ಹೊರನಾಡು ಗ್ರಾಮ ಪಂಚಾಯಿತಿ ಹಿಂಭಾಗದಲ್ಲಿ ಬಸರಿಮಕ್ಕಿಯ ದೇವರಾಜಯ್ಯ ಅವರ ಪಾಳು ಗದ್ದೆಯಲ್ಲಿ ಪೂರ್ವಾಭಿಮುಖವಾಗಿ ನಿಂತಿರುವ ಮತ್ತೊಂದು ಸ್ಮಾರಕದ ಬಲಭಾಗಕ್ಕೆ ಆಶೀರ್ವಾದ ಪೂರ್ವಕವಾಗಿ ಮೇಲೆತ್ತಿದ ತೆರೆದ ಹಸ್ತದ ಸ್ತ್ರೀಯೊಬ್ಬಳ ಬಲತೋಳು ಹಾಗೂ ಮಧ್ಯದಲ್ಲಿ ದಂಪತಿಗಳು ಕೈಮಗಿದು ಕುಳಿತಿರುವ ಚಿತ್ರಣ, ಸೂರ್ಯ ಚಂದ್ರರ ಚಿತ್ರಣವಿದೆ. ಭೈರವರಸರ ಆಡಳಿತ ಕಾಲದಲ್ಲಿ ಕಳಸ ಸೀಮೆಯ ಹೊರನಾಡಿನ ಯೋಧನೊಬ್ಬ ಯುದ್ದದಲ್ಲಿ ಹೋರಾಡಿ ಮಡಿದ ನಿಮಿತ್ತ ಅವನ ಪತ್ನಿ ಚಿತೆಯೇರಿ ಆತ್ಮಾರ್ಪಣೆ ಮಾಡಿಕೊಂಡ ನಿಮಿತ್ತ ಪತಿಪತ್ನಿಯರ ಪರಾಕ್ರಮ-ತ್ಯಾಗದ ಸ್ಮಾರಕವಾಗಿ ಈ ಒಕ್ಕೈ ಮಹಾಸತಿ ಕಲ್ಲು ಪ್ರತಿಷ್ಟಾಪಿಸಲ್ಪಟ್ಟಿದೆ ಎಂದು ಪಾಂಡುರಂಗ ಅವರು ಹೇಳುತ್ತಾರೆ. ಜೊತೆಗೆ ಈ ಚಾರಿತ್ರಿಕ ಮಹಾಸತಿ ಕಲ್ಲು ಕೃಷಿದೇವತೆ (ಗಾಳಿ ದೇವತೆ) ಯಾಗಿ ಸ್ಥಳೀಯ ರೈತರಿಂದ ಇಂದಿಗೂ ಆರಾಧಿಸಲ್ಪಡುತ್ತಿರುವುದು ವಿಶೇಷ ಸಂಗತಿ.

ಇತಿಹಾಸ ತಜ್ಞ ಮೈಸೂರಿನ ಡಾ.ಎಂ.ಜಿ.ಮಂಜುನಾಥ್ ಮತ್ತು ಕ್ಷೇತ್ರ ಕಾರ್ಯದಲ್ಲಿ ದೊಡ್ಡಮನೆ ರಾಜೇಂದ್ರಹೆಗ್ಗಡೆ, ಮಳಲಗದ್ದೆ ಶ್ರೇಣಿಕ್, ಬಸರೀಮಕ್ಕಿ ಗಣೇಶಭಟ್, ಮಧು ಗಣೇಶ್ ಭಟ್, ಹಾಗೂ ಬಸರೀಮಕ್ಕಿ ವೆಂಕೇಗೌಡ, ತೋಟಗಾರಿಕೆ ಚಂದ್ರಪ್ಪ, ಸುಗುಣ ಶೇಷೋಜಿರಾವ್ ಸಹಕರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

error: Content is protected !!