-ಶ್ರೇಯಾ ಕುಂದಗೋಳ
ಜೇನುತುಪ್ಪ ಆಯುರ್ವೇದ ಚಿಕಿತ್ಸೆ ಪದ್ದತಿಯಲ್ಲಿ ಪ್ರಮುಖವಾದ ದ್ರವ್ಯ ಅಥವಾ ಪದಾರ್ಥ. ಇದರ ಹೊರತಾಗಿ ಆಯುರ್ವೇದದ ಔಷಧೋಪಚಾರ ಅಪೂರ್ಣವಾಗುತ್ತದೆ. ಪ್ರಕೃತಿಯಲ್ಲಿ ವಿವಿಧ ಪುಷ್ಪ ರಸಗಳು ಹೇರಳವಾಗಿವೆ. ಜೇನು ಹುಳುಗಳು ಅವಿರತ ಪರಿಶ್ರಮದಿಂದ ಈ ಪುಷ್ಪ ರಸವನ್ನು ಸಂಗ್ರಹಿಸಿ ಜೇನು ತುಪ್ಪವನ್ನು ಸಿದ್ಧಪಡಿಸುತ್ತವೆ. ಋತು ವಿಶೇಷ, ಸಸ್ಯಗಳು ಅಥವಾ ಪುಷ್ಪ ವಿಶೇಷದ ರೂಪದಲ್ಲಿ ಜೇನು ತುಪ್ಪದಲ್ಲಿರುವ ವಿವಿಧತೆಯನ್ನು ಗುರುತಿಸಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಸಂಗ್ರಹವಾಗುವ ಹಿಮಾಲಯದ ಜೇನು ತುಪ್ಪದಲ್ಲಿ ಔಷಧಿ ಗುಣಗಳು ಹೇರಳವಾಗಿರುತ್ತವೆ. ಈ ಋತುವಿನಲ್ಲಿ ಸಂಗ್ರಹವಾಗುವ ಜೇನುತುಪ್ಪ ಶ್ವೇತವರ್ಣ, ಹರಳರಳು ಹಾಗೂ ಸುಗಂಧಿವಾಗಿರುತ್ತದೆ. ಇದನ್ನು ಸೇವಿಸಿದಾಗ ಗಂಟಲಲ್ಲಿ ತುಸು ಖಾರದ ರುಚಿಯ ಅನುಭವವಾಗುತ್ತದೆ. ಇದು ತುಂಬ ಕಡಿಮೆ ಪ್ರಮಾಣದಲ್ಲಿ ಲಭ್ಯವಾಗುತ್ತದೆ.
ಫಾಲ್ಗುಣ ಮತ್ತು ಚೈತ್ರ ಮಾಸಗಳಲ್ಲಿ ಸಿದ್ಧವಾಗುವ, ಸಾಸಿವೆ ಗಿಡದ ಹೂಗಳ ಜೇನುತುಪ್ಪ ಕೂಡ, ಕಾರ್ತಿಕ ಮಾಸದಲ್ಲಿ ಸಿದ್ಧವಾಗುವ ಜೇನು ತುಪ್ಪಕ್ಕೆ ಸಮಾನವಾಗಿರುತ್ತದೆ. ವೈಶಾಖ ಮತ್ತು ಜೇಷ್ಠ ಮಾಸಗಳಲ್ಲಿ ಸಿದ್ಧವಾಗಿ ಸಂಗ್ರಹವಾಗುವ ಜೇನುತುಪ್ಪ ಕೆಂಪು ವರ್ಣದ್ದಾಗಿದ್ದು, ಇದರ ಸಂಗ್ರಹ ಕೂಡ ಕಡಿಮೆ ಇರುತ್ತದೆ. ಇದು ಪರಿಮಳಯುಕ್ತವಾಗಿರುತ್ತದೆ. ಆಷಾಢ ಮಾಸದಲ್ಲಿ ಸಿದ್ಧವಾಗುವ ಜೇನುತುಪ್ಪ ಕೂಡ ಕೆಂಪು ವರ್ಣದ್ದಾಗಿರುತ್ತದೆ. ಮತ್ತು ಇದರ ರುಚಿ ಸ್ವಲ್ಪ ವಿಷಯುಕ್ತ ಆಗಿರುತ್ತದೆ. ಈ ಜೇನು ತುಪ್ಪವನ್ನು ಹೆಚ್ಚು ಸೇವಿಸಿದರೆ ದೇಹದಲ್ಲಿ ಉಷ್ಣತೆಯ ಪ್ರಭಾವ ಕಾಣಿಸುತ್ತದೆ. ಕೆಲವೊಮ್ಮೆ ಹೊಟ್ಟೆ ಮುರಿಯುತ್ತ ಭೇದಿ ಉಂಟಾಗಬಹುದು. ಜೇನುತುಪ್ಪ ಪ್ರಾಚೀನ ಕಾಲದಿಂದಲೂ ಮಧುರ ಸಿಹಿ ದ್ರವ್ಯಗಳ ಪ್ರತಿನಿಧಿ ಎನಿಸಿದೆ. ಇದರ ಪ್ರಯೋಗದಿಂದಲೇ ಇದರ ಉಪಯುಕ್ತತೆ ಮತ್ತು ಔಷಧೀಯ ಗುಣಗಳ ತಿಳುವಳಿಕೆ ಮತ್ತು ಅನುಭವ ಉಂಟಾಗುತ್ತದೆ. ಜೇನು ತುಪ್ಪದಲ್ಲಿ ಅನೇಕ ಉಪಯುಕ್ತ ಅಂಶಗಳಿವೆ. ಇದರಲ್ಲಿ ಗ್ಲುಕೋಸ್ ಮತ್ತು ಫ್ರಕ್ಟೋಸ್ ಹೇರಳ ಪ್ರಮಾಣದಲ್ಲಿವೆ.
ಶುದ್ಧವಾದ ಜೇನುತುಪ್ಪ ನೀರಿನಲ್ಲಿ ತಂತಾನೆ ಕರಗಿ, ಕಳೆಯುವುದಿಲ್ಲ. ಆದರೆ ಸಕ್ಕರೆ ಸ್ವಲ್ಪ ಸಮಯದಲ್ಲಿ ತಂತಾನೆ ಕರಗಿ, ಕಳೆಯುತ್ತದೆ. ಜೇನುತುಪ್ಪ ಗಾಢವಾಗಿದ್ದಷ್ಟೂ ಅದರಲ್ಲಿ ತೇವಾಂಶ (ನೀರಿನ ಅಂಶ) ಕಡಿಮೆಯಿದ್ದಷ್ಟು ಅದು ಹೆಚ್ಚು ಶುದ್ಧವಾಗಿರುತ್ತದೆ. ಜೇನುತುಪ್ಪ ಚಳಿಯಲ್ಲಿ ಹೆಪ್ಪುಗಟ್ಟುತ್ತದೆ. ಮತ್ತು ಉಷ್ಣ ವಾತಾವರಣವಿದ್ದರೆ ಸ್ವಲ್ಪ ಕರಗಿ ದ್ರವವಾಗುತ್ತದೆ. ಜೇನುತುಪ್ಪ ಉಷ್ಣ ಗುಣವುಳ್ಳದ್ದು. ವಿಶೇಷವಾಗಿ ಇದನ್ನು ಜೇನು ತೊಟ್ಟಿಯಿಂದ ತೆಗೆದಾಗ, ಆ ಸಮಯ ಇದರ ಉಷ್ಣಗುಣವುಳ್ಳದ್ದಾಗಿರುತ್ತದೆ. ನಿಧಾನವಾಗಿ ಇದರ ಪ್ರಭಾವ ಸಾಮಾನ್ಯ ಸ್ಥಿತಿಯನ್ನು ತಲುಪುತ್ತದೆ. ಜೇನು ತುಪ್ಪವನ್ನು ಬಿಸಿ ನೀರಿನೊಡನೆ ಸೇವಿಸಿದರೆ ಉಷ್ಣಪ್ರಭಾವ ಬೀರುತ್ತದೆ. ಮತ್ತು ತಣ್ಣೀರಿನೊಡನೆ ಸೇವಿಸಿದರೆ ಶೀತ ಪ್ರಭಾವನ್ನುಂಟು ಮಾಡುತ್ತದೆ. ಬೆಳಗ್ಗೆ ಮತ್ತು ಸಾಯಂಕಾಲ ಎರಡೂ ಸಮಯ, ಬಿಸಿ ನೀರಿನೊಡನೆ ಜೇನು ತುಪ್ಪವನ್ನು ಸೇವಿಸುತ್ತ ಬಂದರೆ, ದೇಹದಲ್ಲಿ ಕೊಬ್ಬು ಕಡಿಮೆಯಾಗುತ್ತದೆ.
ಪ್ರತಿನಿತ್ಯ ಒಂದು ಹನಿ ಜೇನು ತುಪ್ಪವನ್ನು ಕಣ್ಣಿಗೆ ಹಾಕಿಕೊಳ್ಳುತ್ತಿದ್ದರೆ ಕಣ್ಣಿನ ದೃಷ್ಟಿ ಉತ್ತಮವಾಗುತ್ತದೆ. ಮತ್ತು ಕಣ್ಣುಗಳ ಪ್ರತಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ. ಬೇಸಿಗೆಯ ದಿನಗಳಲ್ಲಿ ಒಂದು ದೊಡ್ಡ ಲೋಟ ನೀರಿನಲ್ಲಿ ಎರಡು ಚಮಚ ಜೇನುತುಪ್ಪ ಮತ್ತು ನಾಲ್ಕಾರು ಹನಿ ನಿಂಬೆರಸವನ್ನು ಸೇರಿಸಿ ಕುಡಿಯುವುದರಿಂದ, ತಕ್ಷಣವೇ ದೇಹಕ್ಕೆ ಶಕ್ತಿ ದೊರೆಯುತ್ತದೆ. ಅಲ್ಲದೆ ಇದರಿಂದ ಮೂತ್ರ ವಿಸರ್ಜನೆ ಕೂಡ ಸುರಳಿತವಾಗುವುದು. ಕೇವಲ ಜೇನುತುಪ್ಪ ಸೇವಿಸುವುದು ಕೂಡ ಹಿತಕರ. ಇದನ್ನು ಸೇವಿಸಿದ ತಕ್ಷಣ ದೇಹದಲ್ಲಿ ಜೀವವಸ್ತುಕರಣವಾಗಿ, ದೇಹದಲ್ಲಿ ಶಕ್ತಿಯನ್ನು ಉತ್ಪಾದಿಸುತ್ತದೆ. ಇದು ಜೀರ್ಣವಾಗುವಷ್ಟು ಶೀಘ್ರ, ಬೇರೆ ಯಾವ ಆಹಾರ ಪದಾರ್ಥ ಜೀರ್ಣ ವಾಗುವುದಿಲ್ಲ. ಔಷಧೀಯೊಡನೆ ಇದನ್ನು ಸೇವಿಸುವುದರಿಂದ, ಔಷಧೀಯ ಶಕ್ತಿ ಹೆಚ್ಚಾಗುತ್ತದೆ. ನವಜಾತ ಶಿಶುವಿಗೆ ತಕ್ಷಣ ಜೇನುತುಪ್ಪ ತಿನ್ನಿಸುವುದರಿಂದ ಶಿಶು ನೀರೋಗಿಯಾಗುತ್ತದೆ. ನಿತ್ಯ ನಿಯಮಿತವಾಗಿ ಜೇನುತುಪ್ಪ ಸೇವಿಸುವುದರಿಂದ ಹೃದಯ ಮತ್ತು ಮತ್ತು ಮಿದುಳಿಗೆ ಶಕ್ತಿ ದೊರೆಯುತ್ತದೆ. ಹಾಗೂ ಆಯಸ್ಸು ವೃದ್ಧಿಯಾಗುತ್ತದೆ.
ಆದ್ದರಿಂದ ಈ ಅರ್ಥದಲ್ಲಿ ಜೇನುತುಪ್ಪಕ್ಕೆ ಅಮೃತ ಎಂದು ಕರೆಯಲಾಗುತ್ತದೆ. ಈ ದಿನಗಳಲ್ಲಿ ವಿವಿಧ ಪ್ರದೇಶಗಳಿಂದ ತರಸಿದ ವಿವಿಧ ಪ್ರಭೇದಗಳ ಜೇನು ಹುಳುಗಳಿಂದ ಜೇನುತುಪ್ಪ ಕೃಷಿ ಮಾಡಲಾಗುತ್ತದೆ. ಅದಾಗ್ಯೂ ದೇಶಿಯ ಜೇನುಹಳುಗಳಿಂದ ತಯಾರಾದ ಜೇನುತುಪ್ಪ ಸುಸ್ವಾದ ಮತ್ತು ಗುಣವುಳ್ಳದ್ದು ಎಂದು ಹೇಳಲಾಗಿದೆ. ಜೇನು ತುಪ್ಪವನ್ನು ವಿಶೇಷವಾಗಿ ಮಕ್ಕಳು ಮತ್ತು ವೃದ್ಧರು ಸೇವಿಸುವುದು ಲಾಭಕರ ಮತ್ತು ಹಿತಕರ. ಜೇನು ತುಪ್ಪದಲ್ಲಿ ದೈಹಿಕ ವಿಕಾಸ ಮತ್ತು ಜೀರ್ಣ ಪ್ರಕ್ರಿಯೆಯನ್ನು ಉತ್ತಮಗೊಳಿಸುವ ಎಲ್ಲ ಪೋಷಕಾಂಶಗಳು ಇರುತ್ತದೆ. ರೋಗಾಣು ನಾಶಕವಾದ ಇದು, ಉತ್ತಮ ಸೇವನೆಯ ಪದಾರ್ಥ ಕೂಡ.
ಮಕ್ಕಳಿಗಾಗಿ ತಾಯಿಯ ಹಾಲಿನ ನಂತರ, ಸಾರ್ವಾಧಿಕ ಪೋಶಕಾಂಶವುಳ್ಳದ್ದು ಜೇನುತುಪ್ಪವೇ ಎಂದು ಆಯುರ್ವೇದ ಶಾಸ್ತ್ರದಲ್ಲಿ ಹೇಳಿದೆ. ಚಳಿಗಾಲದಲ್ಲಿ ಮಲಗುವ ಸಮಯ, ತಣ್ಣನೆಯ ಹಾಲಿನೊಡನೆ ಜೇನುತುಪ್ಪ ಸೇವಿಸುವುದರಿಂದ ಕೃಶ ದೇಹ, ಸ್ಥೂಲ ಮತ್ತು ಸದೃಢವಾಗುತ್ತದೆ. ಇದಕ್ಕೆ ವಿರುದ್ಧವಾಗಿ ಪ್ರಾತಃ ಕಾಲದಲ್ಲಿ ಶೌಚಕ್ಕೆ ಹೋಗುವ ಮುಂಚೆ, ಒಂದು ಲೋಟ ಬೆಚ್ಚನೆಯ ನೀರಿನೊಡನೆ ಜೇನುತುಪ್ಪ ಸೇವಿಸುತ್ತ ಬಂದರೆ, ದೇಹದ ಸ್ಥೂಲತೆ ಕಡಿಮೆಯಾಗುತ್ತದೆ. ಇದಲ್ಲದೇ, ಜೇನು ತುಪ್ಪವನ್ನು ವಿವಿಧ ಪ್ರಕಾರದ ಆಹಾರ, ಹಣ್ಣು, ತರಕಾರಿಯೊಡನೆಯೊ ಸೇವಿಸಲಾಗುತ್ತದೆ. ಜೇನುತುಪ್ಪವನ್ನು ವಿಭಿನ್ನ ಪ್ರಕಾರದ ಆಹಾರಗಳೊಡನೆ ಸೇವಿಸುವುದರಿಂದ, ವಿವಿಧ ಪ್ರಕಾರದ ಪ್ರಭಾವ ಉಂಟಾಗುತ್ತದೆ. ಆದ್ದರಿಂದ ಇದರ ಉಪಯೋಗ ಮಾಡುವ ಮುಂಚೆ ಚಿಕಿತ್ಸಕ ವೈದ್ಯ ಮುಂತಾದ ತಜ್ಞರ ಸಲಹೆ ಪಡೆಯುವುದು ಸೂಕ್ತ.