ಕೂಗು ನಿಮ್ಮದು ಧ್ವನಿ ನಮ್ಮದು

ಗೆಳೆಯನನ್ನೇ ರೇಪ್ ಮಾಡಿದ.. ಆತನ ಮನೆ ದೋಚಿ ಪರಾರಿಯಾದ HIV ಪೀಡಿತ

ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿ ಬೆಚ್ಚಿ ಬೀಳುವ ಘಟನೆಯೊಂದು ನಡೆದಿದೆ. 56 ವರ್ಷದ ಎಚ್‌ಐವಿ ಸೋಂಕಿತ ವ್ಯಕ್ತಿಯೊಬ್ಬ ತನ್ನದೇ ಸ್ನೇಹಿತನ ಮೇಲೆ ಅತ್ಯಾಚಾರಗೈದು ಆತನ ಮನೆಯನ್ನು ದರೋಡೆ ಮಾಡಿರುವ ವಿಚಿತ್ರ ಘಟನೆ ನಡೆದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿರುವ ಬಗ್ಗೆ ನಿನ್ನೆ ವರದಿಯಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ನೆಲಮಂಗಲ ಸಮೀಪದ ಹಳ್ಳಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪೊಲೀಸರ ಮಾಹಿತಿಯಂತೆ, ಎನ್‌ಜಿಒವೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತನೊಂದಿಗೆ ಒಂದು ವರ್ಷದ ಹಿಂದೆ ಆರೋಪಿ ಶ್ಯಾಮ್ ಪಾಟೀಲ್ ಸ್ನೇಹ ಬೆಳೆಸಿದ್ದ. ತಾನು ಕ್ಷಯರೋಗದಿಂದ ಬಳಲುತ್ತಿದ್ದೇನೆ ಎಂದು ಪಾಟೀಲ್ ಹೇಳಿಕೊಂಡು ಸಂತ್ರಸ್ತನ ವಿಶ್ವಾಸ ಗಳಿಸಿದ್ದ. ಇತ್ತೀಚೆಗಷ್ಟೇ ಸಂತ್ರಸ್ತನ ಪತ್ನಿ ಮತ್ತು ಮಕ್ಕಳು ಊರಿಗೆ ತೆರಳಿದ್ದು, ಆರೋಪಿ ಪಾಟೀಲ ಈ ಸಮಯವನ್ನು ತನ್ನ ಲಾಭಕ್ಕೆ ಬಳಸಿಕೊಂಡಿದ್ದಾನೆ.

ಸಂತ್ರಸ್ತ ಒಂಟಿಯಾಗಿ ಮನೆಯಲ್ಲಿದ್ದಾನೆ ಎಂಬ ವಿಚಾರ ತಿಳಿದುಕೊಂಡು ಆರೋಪಿ ಪಾಟೀಲ್ ಸ್ನೇಹಿತನ ಮನೆಗೆ ಭೇಟಿ ನೀಡಿ, ಅಲ್ಲಿ ಮಾತನಾಡುತ್ತಾ ಜ್ಯೂಸ್ ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಟ್ಟಿದ್ದಾನೆ. ಸಂತ್ರಸ್ತ ವ್ಯಕ್ತಿ ಜ್ಯೂಸ್ ಕುಡಿದ ತಕ್ಷಣ ಪ್ರಜ್ಞಾಹೀನ ಸ್ಥಿತಿಗೆ ತಲುಪುತ್ತಿದ್ದಂತೆ, ಪಾಟೀಲ್ ಆತನ ಮುಖಕ್ಕೆ ಸ್ಪ್ರೇ ಸಿಂಪಡಿಸಿ ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಗೆ ತಲುಪಿಸಿ ಅಸಹಾಯಕನನ್ನಾಗಿ ಮಾಡಿದ್ದಾನೆ. ಬಳಿಕ ಹೆಚ್‌ಐವಿ ಸೋಂಕಿತ ಆರೋಪಿ ಸ್ನೇಹಿತನ ಮೇಲೆ ಅತ್ಯಾಚಾರ ಎಸಗಿ ಮನೆಯ ಕಬೋಡ್‌ ನಲ್ಲಿಟ್ಟಿದ್ದ 88 ಗ್ರಾಂ ಚಿನ್ನಾಭರಣ, 20 ಸಾವಿರ ನಗದು ಜೊತೆಗೆ ಮೊಬೈಲ್ ಹ್ಯಾಂಡ್ ಸೆಟ್ ದೋಚಿ ಪರಾರಿಯಾಗಿದ್ದಾನೆ.

ಮರುದಿನ ಬೆಳಗ್ಗೆ ಸಂತ್ರಸ್ತನಿಗೆ ಎಚ್ಚರವಾಗಿದ್ದು, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದು ಮತ್ತು ದರೋಡೆ ಮಾಡಿರುವುದು ಗಮನಕ್ಕೆ ಬಂದಿದೆ. ತಕ್ಷಣ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ಶ್ಯಾಮ್ ಪಾಟೀಲ್ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

error: Content is protected !!