ಬೆಂಗಳೂರು: ಯಾವ ಪುರುಷಾರ್ಥಕ್ಕೆ ಈ ಅಧಿವೇಶನ ನಡೆಯುತ್ತಿದೆ. ದಿನಕ್ಕೆ 1.5-2 ಕೋಟಿ ರೂಪಾಯಿ ,ನಷ್ಟು ಪೋಲಾಗುವ ಜನರ ತೆರಿಗೆ ಹಣಕ್ಕೆ ಹೊಣೆ ಯಾರು ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. “ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವುದೇ ಪ್ರಜಾಪ್ರಭುತ್ವ.” ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಾಹಂ ಲಿಂಕನ್ ಹೇಳಿದ ಈ ಮಾತು ಪ್ರಜಾಸತ್ತೆಯನ್ನು ಗೌರವಿಸುವ ಪ್ರತಿ ವ್ಯಕ್ತಿಗೂ ದಾರಿದೀಪ.
ಆದ್ರೆ, ಇಂದು ಪ್ರಜಾಪ್ರಭುತ್ವವೆಂದರೆ; “ರಾಜಕೀಯದಿಂದ, ರಾಜಕೀಯಕ್ಕಾಗಿ, ಎನ್ನುವಂತಾಗಿದೆ. ರಾಜಕೀಯಕೋಸ್ಕರ ಕಳೆದ ಎರಡು ದಿನಗಳ ವಿಧಾನಮಂಡಲ ಕಲಾಪ ‘ರಾಜಕೀಯ ಪ್ರತಿಷ್ಠೆ’ಗೆ ಆಹುತಿಯಾಗಿದೆ. ಬೆಳಗಾವಿ ಕಲಾಪವನ್ನು ಬಲಿ ಪಡೆದ ಮೇಲೂ ರಾಜ್ಯಪಾಲರ ಭಾಷಣದ ಮೇಲೆ ಅಮೂಲ್ಯ ಚರ್ಚೆ ನಡೆಸಬೇಕಿದ್ದ ಈ ಸದನಕ್ಕೂ ಅದೇ ಚಾಳಿ ವಕ್ಕರಿಸಿದೆ. ‘ಪ್ರಜಾಪ್ರಭುತ್ವಕ್ಕೆ ಗ್ರಹಣ’ ಹಿಡಿಸುವ ಕೆಲಸ ನಡೆದಿದೆ.
10 ನಿಮಿಷ ಧರಣಿ, ಆಮೇಲೆ ಕಲಾಪ ಮುಂದೂಡುವುದು; ಸದನ ನಡೆಯುವ ರೀತಿ ಇದೇನಾ? ಯಾವ ಪುರುಷಾರ್ಥಕ್ಕೆ ಈ ಅಧಿವೇಶನ? ಒಂದು ದಿನಕ್ಕೆ 1.5-2 ಕೋಟಿ ರೂಪಾಯಿ ನಷ್ಟು ಪೋಲಾಗುವ ಜನರ ತೆರಿಗೆ ಹಣಕ್ಕೆ ಉತ್ತರದಾಯಿತ್ವ ಯಾರದ್ದು? ಅವರ ನಿರೀಕ್ಷೆಗಳನ್ನು ‘ಕಾಲಿನ ಕಸ’ ಮಾಡಿಕೊಂಡ ರಾಜಕೀಯ ಪ್ರತಿಷ್ಠೆಗೆ ಕೊನೆ ಇಲ್ಲವೆ?. ಕೋರೋನಾ ಇಂದ 2 ವರ್ಷ ಮಕ್ಕಳ ಶಿಕ್ಷಣ ಹಾಳಾಯ್ತು. ಈಗ ಹಿಜಾಬ್, ಕೇಸರಿ ಶಾಲು ಗಲಾಟೆಯಿಂದ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆಯೇ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ.
ಇದಕ್ಕೆಲ್ಲ ಹೊಣೆ ಯಾರು? ಸಮಾಜಘಾತುಕ ಶಕ್ತಿಗಳನ್ನು ಹತ್ತಿಕ್ಕುವ ಜವಾಬ್ದಾರಿ ರಾಜಕೀಯ ಪಕ್ಷಗಳಿಗೆ ಇಲ್ಲವೇ ಕಲಾಪಕ್ಕೆ ‘ಜನಪರ ಅಜೆಂಡಾ’ ಇರಬೇಕೆ ವಿನಾಹಾ ‘ಚುನಾವಣೆ ಅಜೆಂಡಾ’ ಅಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಅಧಿವೇಶನವು ‘ಮತ ಗಳಿಕೆಗೆ ಗುರಾಣಿ’ ಆಗಿರುವುದು ದುರದೃಷ್ಟಕರ. ತಮ್ಮ ಪ್ರತಿಷ್ಠೆಗೆ ಕಲಾಪವನ್ನು ಹಳಿತಪ್ಪಿಸಿ ಜನರ ನಿರೀಕ್ಷೆಗಳನ್ನು ಹೊಸಕಿ ಹಾಕುವುದು ‘ರಾಷ್ಟ್ರೀಯ ಪಕ್ಷಗಳ ರಕ್ಕಸ ರಾಜಕಾರಣಕ್ಕೆ ನಿದರ್ಶನ ಎನ್ನುವುದು ನನ್ನ ಅಭಿಪ್ರಾಯ. ಜನರು ಕಷ್ಟದಲ್ಲಿದ್ದಾರೆ. ಕೋರೋನಾದಿಂದ ಅವರ ಬದಕಿನ ಬವಣೆ ರೋಸಿ ಹೋಗಿದೆ. ಅವರು ರೊಚ್ಚಿಗೇಳುವ ಮುನ್ನ ಆಡಳಿತಾರೂಢ ಬಿಜೆಪಿ & ಅಧಿಕೃತ ಪ್ರತಿಪಕ್ಷ ಕಾಂಗ್ರೆಸ್ ಎಚ್ಚೆತ್ತುಕೊಂಡು ತಮ್ಮ ಜನವಿರೋಧಿ ನೀತಿ ಬದಲಿಸಿಕೊಳ್ಳಬೇಕು. ವಿಧಾನ ಕಲಾಪಕ್ಕೆ ಕುಣಿಕೆ ಬಿಗಿಯುವ ಹೀನ ರಾಜಕಾರಣವು ನಿಲ್ಲಲಿ ಎಂದು ಎಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.