ಬೆಂಗಳೂರು: ಕೇಂದ್ರ ಗೃಹ ಸಚಿವರು ದೇಶದಲ್ಲಿ ಹಲವಾರು ಭಾಷೆಗಳನ್ನು ನಾಶ ಮಾಡುವ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆಗಳನ್ನು ಇಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ ಗೃಹ ಸಚಿವರಿಗೆ ತಿಳುವಳಿಕೆ ಮೂಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಶನಿವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ಥಳೀಯ ಭಾಷೆಗಳನ್ನು ಉದ್ಧಾರ ಮಾಡುತ್ತೇವೆ ಎಂದು ಕೇಂದ್ರ ಸಚಿವರು ಹಿಂದಿಯನ್ನು ಹೇರಿಕೆ ಮಾಡಲು ಹೊರಟಿದ್ದಾರೆ. ಇದು ಸರಿಯಲ್ಲ, ನಾವು ಒಪ್ಪುವುದಿಲ್ಲ. ಪದೇ ಪದೇ ಭಾಷೆಗಳ ವಿಷಯವನ್ನೇ ಕೆದಕುತ್ತಾ ಕೂರುವುದು ಸರಿಯಲ್ಲ. ಇದನ್ನು ಹೀಗೇಯೇ ಕೆದಕುತ್ತಾ ಹೋದರೆ ದೇಶದ ಸಮಗ್ರತೆ, ಏಕತೆಗೆ ಧಕ್ಕೆಯಾಗುತ್ತದೆ. ಗೃಹ ಸಚಿವರ ನೇತೃತ್ವದ ಸಮಿತಿ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ವರದಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ಪ್ರತಿಭಟನೆ ಮಾಡಿದ್ದಾರೆ. ಪಶ್ಚಿಮ ಬಂಗಾಳ, ಕೇರಳದಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಒಂದು ರಾಷ್ಟ್ರ-ಒಂದು ಭಾಷೆ ಎನ್ನುವ ನೀತಿಯನ್ನು ತಂದು ಬಿಜೆಪಿ ನಾಯಕರು ಇತರೆ ಭಾಷೆಗಳನ್ನು ಹತ್ತಿಕ್ಕಲು ಹೊರಟಿದ್ದಾರೆ. ಆದರೆ, ಇತರೆ ಭಾಷೆಗಳನ್ನು ನಾಶ ಮಾಡಿ ಒಂದು ರಾಷ್ಟ್ರ ಕಟ್ಟಲು ಹೇಗೆ ಸಾಧ್ಯ? ಕೇಂದ್ರದ ಧೋರಣೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು.
ಹಿಂದಿ ಹೇರಿಕೆ ಮಾಡುವುದಕ್ಕಿಂತ ಬೇರೆ ಸಮಸ್ಯೆಗಳ ಕಡೆ ಕೇಂದ್ರ ಸರ್ಕಾರ ಗಮನ ಹರಿಸುವುದು ಉತ್ತಮ. ಹಸಿವಿನ ಸೂಚ್ಯಂಕದಲ್ಲಿ ನಮ್ಮ ದೇಶ 104ನೇ ಸ್ಥಾನದಲ್ಲಿದೆ. ಮೊದಲು ದೇಶದಲ್ಲಿರುವ ಇಂತಹ ಸಮಸ್ಯೆಗಳನ್ನು ಬಗೆಹರಿಸಬೇಕು. ಭಾಷೆ ವಿಷಯದಲ್ಲಿ ಸಮಸ್ಯೆಯಾದರೆ ನಮ್ಮಲ್ಲಿರುವ ಕನ್ನಡ ಸಂಘ ಸಂಸ್ಥೆ ಜತೆ ಪ್ರತಿಭಟನೆ ಮಾಡಬೇಕಾಗುತ್ತದೆ. ಕನ್ನಡಕ್ಕೆ ಧಕ್ಕೆ ಬಂದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.
ಎರಡೂ ರಾಷ್ಟ್ರೀಯ ಪಕ್ಷಗಳು ರಾಷ್ಟ್ರಕ್ಕೆ ಮಾರಕ. ಇವೆರಡೂ ಒಂದೇ ನಾಣ್ಯದ ಎರಡು ಮುಖ. ಒಂದೆಡೆ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ, ಮತ್ತೊಂದೆಡೆ ಜನ ಸಂಕಲ್ಪ ಯಾತ್ರೆ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಗಳು ಈಗ ಭಾಷೆ ಇಟ್ಟುಕೊಂಡು ದಬ್ಬಾಳಿಕೆ ಪ್ರಾರಂಭಿಸಿವೆ. ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಜನ ಬಾಗಿಲು ಹಾಕಿದ್ದಾರೆ. ಕರ್ನಾಟಕದಲ್ಲಿಯೂ ಆ ದಿನ ಬರುವುದು ಬಹಳ ದೂರ ಇಲ್ಲ ಎಂದು ಟೀಕಾಪ್ರಹಾರ ನಡೆಸಿದರು.