ಬೆಂಗಳೂರು; ರಾಜ್ಯದಲ್ಲಿ ಹಲವು ಸಮಸ್ಯೆಗಳಿದ್ದು, ಈ ಬಗ್ಗೆ ಚರ್ಚೆ ನಡೆಸಲು ರಾಜ್ಯ ಸರ್ಕಾರ ಕೂಡಲೇ ವಿಧಾನ ಮಂಡಲ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಲೇ ಇದೆ. ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಕಂಗಾಲಾಗಿದ್ದಾರೆ. ಲಾಕ್ಡೌನ್ ನಿಂದಾಗಿ ಬಡವರ ಬದುಕು ಬೀದಿಗೆ ಬಿದ್ದಿದೆ. ಮೇಕೆದಾಟು ಯೋಜನೆಯ ಬಗ್ಗೆ ತಮಿಳುನಾಡು ತಕರಾರು ತೆಗೆಯುತ್ತಿದೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಅಗತ್ಯವಾಗಿದ್ದು, ರಾಜ್ಯ ಸರ್ಕಾರ ಕೂಡಲೇ ವಿಧಾನಮಂಡಲ ಅಧಿವೇಶನ ಕರೆಯಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.‘ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಕುಮಾರಸ್ವಾಮಿ, “ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ಹದಗೆಟ್ಟಿದೆ, ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಬೇಕಿದೆ. ಜೊತೆಗೆ ರಾಜ್ಯದ ಕನ್ನಡಿಗರಿಗೆ ಹಲವರು ವಿಚಾರಗಳಲ್ಲಿ ಅನ್ಯಾಯ ಆಗುತ್ತಿದೆ. ಈ ಎಲ್ಲಾ ವಿಚಾರ ಕುರಿತು ಚರ್ಚೆ ನಡೆಸಬೇಕಾಗಿದೆ. ಹೀಗಾಗಿ ವಿಶೇಷ ಅಧಿವೇಶನ ಕರೆಯುವಂತೆ ಪತ್ರದ ಮೂಲಕ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.