ಕೂಗು ನಿಮ್ಮದು ಧ್ವನಿ ನಮ್ಮದು

ಹಾಸನ ‘ಕುಟುಂಬ ಕಲಹಕ್ಕೆ’ ಹೊಸ ತಂತ್ರ ಮುಂದಿಟ್ಟ ಹೆಚ್ಡಿ ರೇವಣ್ಣ, ಇಷ್ಟಕ್ಕೂ ಅವರ ಇರಾದೆ ಏನು? ದೊಡ್ಡಗೌಡರು ತಥಾಸ್ತು ಅಂತಾರಾ?

ಹಾಸನ ಮಟ್ಟಿಗೆ ತಾನೇ ಅನಭಿಷಕ್ತ ದೊರೆ ಎಂದು ಬೀಗುವ ಹೆಚ್ ಡಿ ರೇವಣ್ಣ ತಮ್ಮ ಪತ್ನಿಗೆ ಟಿಕೆಟ್ ಸಿಗೋಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಬೇರೆಯದ್ದೆ ದಾಳ ಉರುಳಿಸಿದ್ದಾರೆ. ಹಾಸನದ ಮೇಲೆ ದೊಡ್ಡಗೌಡರ ಕುಟುಂಬದ ಹಿಡಿತ ತಪ್ಪುವ ಸಾಧ್ಯತೆಯನ್ನು ಮನಗಂಡು ಹೆಜ್ಜೆ ಹಿಂದಿಟ್ಟಿದ್ದಾರೆ. ಆಯ್ತು ಭವಾನಿಗೆ ಟಿಕೆಟ್ ಕೊಡದಿದ್ದರೆ ಏನಂತೆ, ನನಗೇ ಎರಡೂ ಕಡೆ ಟಿಕೆಟ್ ಕೊಟ್ಟುಬಿಡಿ ಎಂದು ಅಂತಿಮ ದಾಳ ಉರುಳಿಸಿದ್ದಾರೆ.
ಮಾಜಿ ಪ್ರಧಾನಿ ಹೆಚ್ಡಿ ದೇವೆಗೌಡರ ತವರು ಜಿಲ್ಲೆ ಹಾಸನದಲ್ಲಿ ಹಿರಿಯ ಪುತ್ರ ಹೆಚ್ ಡಿ ಕುಮಾರಸ್ವಾಮಿ ಅವರ ಬಿಗಿ ಹಿಡಿತದಿಂದಾಗಿ ಹಾಲಿ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಲ್ಲಿ ಕೋಲಾಹಲ ಎದ್ದಿದೆ. ಟಿಕೆಟ್ ವಿಚಾರವಾಗಿ ಕುಟುಂಬದಲ್ಲಿ ರಾಡಿ ಎದ್ದಿದೆ. ಹಾಸನ ಅಸೆಂಬ್ಲಿ ಕ್ಷೇತ್ರದಲ್ಲಿ ಟಿಕೆಟ್ ಮಹತ್ವಾಕಾಂಕ್ಷಿ ಭವಾನಿ ರೇವಣ್ಣಗೆ ಶತಾಯಗತಾಯ ಟಿಕೆಟ್ ನೀಡೋಲ್ಲ ಎಂದು ಬಿಗಿಪಟ್ಟು ಹಾಕಿಕೊಂಡು ಕುಳಿತುಬಿಟ್ಟಿದ್ದಾರೆ ಕುಮಾರಣ್ಣ! ಇದು ಹೆಡ್ ಆಫೀಸ್ ಪದ್ಮನಾಭನಗರದವರೆಗೂ ತಲುಪಿದ್ದು ಸಂಬಂಧಪಟ್ಟವರು ಅನೇಕ ಸುತ್ತಿನಲ್ಲಿ ದಾಯಾದಿಗಳಂತೆ ಮಾತುಕತೆ ನಡೆಸಿದ್ದಾರೆ. ಇದು ದೊಡ್ಡಗೌಡರ ತಲೆಬೇನಿ ಜಾಸ್ತಿ ಮಾಡಿದೆ.

ಇನ್ನು ಹಾಸನ ಮಟ್ಟಿಗೆ ತಾನೇ ಅನಭಿಷಕ್ತ ದೊರೆ ಎಂದು ಬೀಗುವ ಹೆಚ್ ಡಿ ರೇವಣ್ಣ ತಮ್ಮ ಪತ್ನಿಗೆ ಟಿಕೆಟ್ ಸಿಗೋಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಚಿಕ್ಕ ಮಗುವಿನಂತೆ ನನಗೂ ಟಿಕೆಟ್ ಬೇಡಾ. ನಾನು ಈ ಬಾರಿ ವಿಧಾನಸೌಧದೊಳಕ್ಕೆ ಕಾಲಿಡೋಲ್ಲಾ ಎಂದು ರಚ್ಚೆ ಹಿಡಿದಿದ್ದರು. ಆದರೆ ಇದೀಗ ಸಾವರಿಸಿಕೊಂಡು ಅಂತಹ ದಡ್ಡ ನಿರ್ಧಾರ ತೆಗೆದುಕೊಂಡರೆ ಹಾಸನದ ಮೇಲೆ ದೊಡ್ಡಗೌಡರ ಕುಟುಂಬದ ಹಿಡಿತ ತಪ್ಪುವ ಸಾಧ್ಯತೆಯನ್ನು ಮನಗಂಡು ಹೆಜ್ಜೆ ಹಿಂದಿಟ್ಟಿದ್ದಾರೆ. ಆಯ್ತು ಭವಾನಿಗೆ ಟಿಕೆಟ್ ಕೊಡದಿದ್ದರೆ ಏನಂತೆ, ನನಗೇ ಎರಡೂ ಕಡೆ ಟಿಕೆಟ್ ಕೊಟ್ಟುಬಿಡಿ ಎಂದು ಅಂತಿಮ ದಾಳ ಉರುಳಿಸಿದ್ದಾರೆ.

ಅದ್ಯಾವುದೋ ಎಚ್ ಪಿ ಸ್ವರೂಪ್ ಅಂತೆ, ನಾನು ಆತನ ಹೆಸರನ್ನೇ ಕೇಳಿಲ್ಲ. ಅವರಿಗೆಲ್ಲಾ ಟಿಕೆಟ್ ಕೊಟ್ಟು ಹಾಸನದಲ್ಲಿ ನನ್ನನ್ನು ಮೂಲೆಗುಂಪು ಮಾಡಬೇಡಿ. ಇದು ರೇವಣ್ಣ ಭದ್ರಕೋಟೆ ಎಂದು ಗುಡುಗಿದ್ದಾರೆ. ಈ ಸಂಬಂಧ ಸೋಮವಾರ ತಡರಾತ್ರಿ ಪದ್ಮನಾಭನಗರ ನಿವಾಸದಲ್ಲಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ರನ್ನು ಭೇಟಿಯಾಗಿ ರೇವಣ್ಣ ಮಾತುಕತೆ ನಡೆಸಿದ್ದಾರೆ. ಪರಂಪರಾಗತ ಹೊಳೆನರಸೀಪುರ ಕ್ಷೇತ್ರದ ಜೊತೆಗೆ, ಹಾಸನದಲ್ಲೂ ನಾನೇ ಸ್ಪರ್ಧಿಸುವೆ ಎಂಬ ಪ್ರಸ್ತಾಪ ಮುಂದಿಟ್ಟಿದ್ದಾರೆ.

ವಾಸ್ತವವಾಗಿ ಇಲ್ಲಿ ರೇವಣ್ಣ ಅವರ ಮನದ ಇಂಗಿತ ಬೆರೆಯೇ ಇದೆ. ಹಾಗಾಗಿ ಇದಕ್ಕೆ ಹೆಚ್ಚು ರಾಜಕೀಯ ಮಹತ್ವವಿದೆ. ಒಂದೇ ಏಟಿನಲ್ಲಿ ಎರಡು ಕಲ್ಲು ಹೊಡೆಯುವ ಪ್ರಸ್ತಾಪ ಇದಾಗಿದೆ. ಅದೊಮ್ಮೆ ಮತದಾರ ಪ್ರಭು ದೊಡ್ಡಕುಟುಂಬಕ್ಕೆ ಋಣ ಸಲ್ಲಿಸುವ ಭರದಲ್ಲಿ ಹೊಳೆನರಸೀಪುರದ ಜೊತೆಗೆ ಹಾಸನದಲ್ಲೂ ರೇವಣ್ಣ ವಿಜಜೀಭವ ಅಂದುಬಿಟ್ಟರೆ ರೇವಣ್ಣ ರೊಟ್ಟಿ, ಜಾರಿ ತುಪ್ಪದಲ್ಲಿ ಬಿದ್ದಂತೆ ಸರ್ವಜ್ಞ ಅಂತಾಗಿಬಿಡುತ್ತದೆ.

ಅದೊಮ್ಮೆ ರೇವಣ್ಣ ಹಾಸನದಲ್ಲಿಯೂ ಗೆದ್ದು ಪಕ್ಷಕ್ಕೆ 2 ಸೀಟು ಕಾಣಿಕೆ ಕೊಟ್ಟರೆ, ದೊಡ್ಡಗೌಡರು ಪ್ರಸನ್ನಗೊಂಡು ಮುಂದೆ ಉಪಚುನಾವಣೆಯಲ್ಲಿ ತಮ್ಮ ಸೊಸೆ ಭವಾನಿಗೇ ಟಿಕೆಟ್​ ಎಂದು ಘೋಷಿಸಿಬಿಟ್ಟರೆ ಅಲ್ಲಿಗೆ ಎಲ್ಲವೂ ತಾವಂದುಕೊಂಡಂತೆ ನಡೆಯುತ್ತದೆ. ಸಿಡಿಮಿಡಿಗೊಂಡಿರುವ ತಮ್ಮ ಪತ್ನಿ ಭವಾನಿರನ್ನೂ ಸಮಾಧಾನಪಡಿಸಿದಂತಾಗುತ್ತದೆ. ದೊಡ್ಡಣ್ಣನೂ ಏನೂ ಮಾತಾಡೋಕ್ಕೆ ಆಗೋಲ್ಲ ಎಂಬುದು ರೇವಣ್ಣರ ಲೆಕ್ಕಾಚಾರವಾಗಿದೆ.

ಪ್ರಸ್ತಾಪವೇನೋ ಚೆನ್ನಾಗಿಯೇ ಇದೆ. ಆದರೆ ಇದಕ್ಕೆ ದೊಡ್ಡಗೌಡರು ಮತ್ತು ಹಿರಿಯ ಗೌಡರಾದ ಕುಮಾರಣ್ಣ ಅಸ್ತು ಅಂತಾರಾ? ಚುನಾವಣಾ ಪ್ರಚಾರಕ್ಕೆ ಎದ್ದುಕೂತಿರುವ ದೇವೇಗೌಡರು ತಾವು ತರಿಸಿಕೊಂಡಿರುವ ಖಾಸಗಿ ರಿಪೋರ್ಟ್ ಏನು ಹೇಳುತ್ತದೆ? ರೇವಣ್ಣ ಅಭಿಪ್ರಾಯವನ್ನು ಗ್ರಹಿಸಿರುವ ದೇವೇಗೌಡರು ಅಂತಿಮವಾಗಿ ರೇವಣ್ಣ ಪ್ರಸ್ತಾಪಕ್ಕೆ ತಥಾಸ್ತು ಅಂತಾರಾ? ಕಾದುನೋಡಬೇಕಿದೆ. ಇನ್ನೊಂದರೆಡು ದಿನದಲ್ಲಿ ಬಹಿರಂಗವಾಗಲಿದೆ ರಾಜ್ಯ ರಾಜಕಾರಣದ ದೊಡ್ಡ ಕುಟುಂಬದ ಮಹತ್ವದ ರಾಜಕೀಯ ನಿರ್ಧಾರ.

ನನಗೇ ಟಿಕೆಟ್ ಬೇಕು ಅಂತೇನೂ ಇಲ್ಲ- ಸ್ವರೂಪ್ ಇಂಟರೆಸ್ಟಿಂಗ್ ಹೇಳಿಕೆ ಈ ಮಧ್ಯೆ ಪಕ್ಷದ ಕಟ್ಟಾ ಕಾರ್ಯಕರ್ತ ಎಚ್ ಪಿ ಸ್ವರೂಪ್ ಅವರು ನನಗೇನೂ ಗೊತ್ತಿಲ್ಲ. ಕುಮಾರಣ್ಣ ನನಗೆ ಟಿಕೆಟ್ ಕೊಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಅವರು ನನಗೇ ಟಿಕೆಟ್ ಕೊಡುವುದಾಗಿ ಮಾಧ್ಯಮಗಳಲ್ಲಿ ಪರೋಕ್ಷವಾಗಿ ಹೇಳಿದ್ದಾರೆ. ಹಾಗಾಗಿ ನಾನು ಕಣದಲ್ಲಿ ಇರಲು ಬಯಸುತ್ತೇನೆ. ಆದರೆ ಅಂತಿಮವಾಗಿ ಪಕ್ಷದ ವರಿಷ್ಠರು ಯಾರಿಗೇ ಟಿಕೆಟ್ ನೀಡಿದರೂ ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ನನಗೇ ಟಿಕೆಟ್ ಬೇಕು ಅಂತೇನೂ ಇಲ್ಲ ಎಂದು ಹೇಳಿರುವುದು ಸಹ ಇಂಟರೆಸ್ಟಿಂಗ್ ಆಗಿದೆ.

error: Content is protected !!