ಬೆಂಗಳೂರು: ಸಾವಿರಾರು ಕೋಟಿ ರೂ ಅಕ್ರಮ, ವಂಚನೆ ಎಸಗಿದ ಆರೋಪ ಎದುರಿಸುತ್ತಿರುವ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಸಂಸ್ಥೆ ಹಗರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಪುನರುಚ್ಚರಿಸಿದ್ದಾರೆ. ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ್ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಸಹಕಾರ ಸಚಿವರು, ಈ ಬ್ಯಾಂಕ್ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವ ನಿಟ್ಟಿನಲ್ಲಿ ಎಲ್ಲಾ ಸಿದ್ಧತೆ ನಡೆದಿದೆ. ಶೀಘ್ರದಲ್ಲೇ ಗೃಹ ಸಚಿವಾಲಯ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಶ್ರಿ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಸಂಸ್ಥೆಯಿಂದ 1290 ಕೋಟಿ ರೂ ಅಕ್ರಮ ನಡೆದಿರುವುದು ಇಲ್ಲಿಯವರೆಗೆ ಸಹಕಾರ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಮಾಡಿರುವ ತನಿಖೆಯಿಂದ ಗೊತ್ತಾಗಿದೆ ಎಂಬ ವಿಚಾರವನ್ನು ಸಚಿವ ಎಸ್ ಟಿ ಸೋಮಶೇಖರ್ ವಿಧಾನಪರಿಷತ್ಗೆ ತಿಳಿಸಿದ್ದಾರೆ.
ಬ್ಯಾಂಕ್ನಿಂದ ಸಾಲ ಪಡೆದವ ಅಡಮಾನವಾಗಿ ಇಟ್ಟಿರುವ ದಾಖಲೆ ಬೇರೆಯವರಿಗೆ ಸೇರಿದ್ದರಿಂದ ಸಾಲ ಪಡೆದವನ ದಾಖಲೆಯನ್ನು ಜಪ್ತಿ ಮಾಡಲು ಆಗುವುದಿಲ್ಲ ಎಂದು ಇದೇ ವೇಳೆ ಕಾಂಗ್ರೆಸ್ ಶಾಸಕ ಯುಬಿ ವೆಂಕಟೇಶ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಗರಣವನ್ನು ಸಿಬಿಐಗೆ ವಹಿಸಬೇಕೆಂದು ಬಹಳ ದಿನಗಳಿಂದಲೂ ಕೂಗು ಇದೆ. ಆದರೆ, ಇಡಿ ಮತ್ತು ಸಿಐಡಿಯಿಂದ ತನಿಖೆ ನಡೆಯುತ್ತಿದೆ. ಸಿಬಿಐಗೆ ತನಿಖೆಯನ್ನು ವಹಿಸಲಾಗುವುದು ಎಂದು ಸರ್ಕಾರ ಕೆಲ ತಿಂಗಳ ಹಿಂದೆಯೇ ಹೇಳಿತ್ತಾದರೂ ವಿಳಂಬಗೊಳ್ಳುತ್ತಾ ಬಂದಿದೆ. ಈ ಬಗ್ಗೆ ಸ್ಪಷ್ಟನೆ ಪರಿಷತ್ನಲ್ಲಿ ಸ್ಪಷ್ಟನೆ ನೀಡಿದ ಎಸ್.ಟಿ. ಸೋಮಶೇಖರ್, ಸಿಐಡಿ ತನಿಖೆ ನಡೆಸುತ್ತಿದ್ದರಿಂದ ಸಿಬಿಐಗೆ ಹಸ್ತಾಂತರಿಸುವುದು ವಿಳಂಬವಾಯಿತು ಎಂದಿದ್ದಾರೆ.
ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಜೊತೆಗೆ ವಸಿಷ್ಠ ಸಹಕಾರ ಸೊಸೈಟಿ, ಗುರುರಾಘವೇಂದ್ರ ಸೌಹಾರ್ದ ಸೊಸೈಟಿಯ ಹಗರಣಗಳನ್ನೂ ಸಿಬಿಐ ತನಿಖೆಗೆ ವಹಿಸುವ ಸಾಧ್ಯತೆ ಇದೆ. ಇಲ್ಲ್ಲೆಲ್ಲಾ ಸಾವಿರಾರು ಕೋಟಿ ರೂ ಮೊತ್ತದಷ್ಟು ಅಕ್ರಮಗಳಾಗಿರುವ ಆರೋಪ ಇದೆ. ಒಂದು ವರ್ಷದ ಹಿಂದೆ ಗುರುರಾಘವೇಂದ್ರ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ ರಾಮಕೃಷ್ಣ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು.