ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯ (30) ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ವಸಂತ ನಗರದಲ್ಲಿನ ಮೌಂಟ್ ಕಾರ್ಮೆಲ್ ಕಾಲೇಜು ಬಳಿಯ ಫ್ಲ್ಯಾಟ್ ನ ರೂಮಿನಲ್ಲಿ ಡಾ.ಸೌಂದರ್ಯ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ, ಪತಿ ಡಾ.ನೀರಜ್ ಜೊತೆ ನಿನ್ನೆ ರಾತ್ರಿ ರೂಮು ಸೇರಿದವಳು ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಡಾ.ನೀರಜ್ ಇಂದು ಬೆಳಿಗ್ಗೆ 8 ಗಂಟೆಗೆ ಆಸ್ಪತ್ರೆಗೆ ಹೋದ ಬಳಿಕ 10 ಗಂಟೆಯ ಸುಮಾರಿಗೆ ಡಾ.ಸೌಂದರ್ಯ ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗುತ್ತಿದ್ದು, ಮರಣೋತ್ತರ ಪರೀಕ್ಷೆಗಾಗಿ ಡಾ.ಸೌಂದರ್ಯ ಶವವನ್ನು ಬೌರಿಂಗ್ ಆಸ್ಪತ್ರೆಗೆ ತರಲಾಗಿದ್ದು, ಅಲ್ಲಿ ಕೆಲವೇ ಹೊತ್ತಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ.
ಇನ್ನು ಬೆಳಿಗ್ಗೆಯಿಂದ ಡಾ.ಸೌಂದರ್ಯ ರೂಮಿನ ಬಾಗಿಲು ತೆರೆಯದಿದ್ದಾಗ, ಮನೆಯ ಕೆಲಸದವರು ಹಲವು ಬಾರಿ ರೂಮಿನ ಬಾಗಿಲು ಬಡೆದರೂ ರೂಮಿನ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ, ಪತಿ ಡಾ.ನೀರಜ್ ಅವರಿಗೆ ಕರೆ ಮಾಡಿ ತಿಳಿಸಿದ ನಂತರ ರೂಮಿನ ಬಾಗಿಲನ್ನು ಒಡೆದು ಒಳಹೋಗಿದ್ದಾಗ ಡಾ.ಸೌಂದರ್ಯ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಸಧ್ಯ ಯಾವ ಕಾರಣಕ್ಕೆ ಸೌಂದರ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಮಾಹಿತಿ ತಿಳಿಯಬೇಕಿದ್ದು, ಸಚಿವ ಗೋವಿಂದ ಕಾರಜೋಳ, ಅರಗ ಜ್ಞಾನೆಂದ್ರ ಸೇರಿದಂತೆ ಸರ್ಕಾರದ ಹಲವು ಸಚಿವರು, ಶಾಸಕರು ಬೌರಿಂಗ್ ಆಸ್ಪತ್ರೆ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮನೆಗೆ ದೌಡಾಯಿಸಿದ್ದಾರೆ. ಡಾ.ಸೌಂದರ್ಯ ಆತ್ಮಹತ್ಯೆಗೆ ಶರಣಾದ ಸುದ್ದಿ ಎಲ್ಲರನ್ನೂ ದಿಘ್ಭ್ರಮೆಗೊಳಿಸಿದ್ದು, ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು,ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಬಿಎಸ್ ವೈ ಮನೆಗೆ ತೆರಳಿದ್ದಾರೆ.