ಬೆಳಗಾವಿ: ಕೊರೊನಾ ಎರಡನೇ ಅಲೆ ಎಲ್ಲರಿಗೂ ತಿಳಿದಿರುವಂತೆ ಇದೀಗ ಹಳ್ಳಿಗಳಿಗೂ ಕಾಲಿಟ್ಟಿದೆ. ಅನೇಕ ಹಳ್ಳಿಗಳಲ್ಲಿ ಬಹುತೇಕ ಮನೆಗಳಲ್ಲಿ ಕೊರೊನಾ ವಕ್ಕರಿಸಿದೆ. ಅನೇಕ ಗ್ರಾಮಗಳನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಈ ಹಿಂದೆ ಕಳೆದ ವರ್ಷ ಕೊರೊನಾ ಹಳ್ಳಿಗಳಿಗೆ ಕಾಲಿಡದಂತೆ ಎಚ್ಚರ ವಹಿಸಲಾಗಿತ್ತು. ಆದರೆ ಈ ಬಾರಿಯ ಎರಡನೇ ಅಲೆ ನಿಜಕ್ಕೂ ತತ್ತರಿಸುವಂತೆ ಮಾಡಿಬಿಟ್ಟಿದೆ. ಇದರಿಂದ ಹೇಗಾದರೂ ಪಾರಾಗಬೇಕೆಂದು ಅನೇಕ ಹಳ್ಳಿಗಳಲ್ಲಿ ದೇವರ ಮೊರೆ ಹೋಗಿದ್ದಾರೆ. ತಮಿಳುನಾಡಿನ ಕೋಯಮತ್ತೂರಿನಲ್ಲಿ ಕೊರೊನಾ ದೇವಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಲಾಗುತ್ತಿದ್ದರೆ ಇತ್ತ ಕೊಳ್ಳೆಗಾಲದಲ್ಲಿಯೂ ಸಹ ಕೊರೊನಾ ಮಾರಮ್ಮನನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಲಾಗುತ್ತಿದೆ.
ಇನ್ನು ಅನೇಕ ಹಳ್ಳಿಗಳಲ್ಲಿ ತಮ್ಮ ತಮ್ಮ ಊರಿನ ದೇವರ ಬಳಿ ಜನರು ಮೊರೆ ಹೋಗುತ್ತಿದ್ದಾರೆ. ಒಂದಲ್ಲಾ ಒಂದು ಪರಿಹಾರ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅದೇ ರೀತಿ ಇದೀಗ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಕೊಣ್ಣೂರ-ಮರಡಿಮಠ ಗ್ರಾಮದಲ್ಲಿ ಕೊರೊನಾ ದೂರವಾಗಲಿ ಎಂದು ಗ್ರಾಮದಲ್ಲಿ ರಾತ್ರಿ ಹೊತ್ತು ತಿರುಗಾಡಲು ಮಠದ ಕುದುರೆಯನ್ನು ಬಿಡಲಾಗಿತ್ತು. ಎರಡು ದಿನ ರಾತ್ರಿ ಸಂಚರಿಸಿದ ದೇವರ ಅಶ್ವ ಇಂದು ಬೆಳಿಗ್ಗೆ ಅಸ್ತಂಗತವಾಗಿದೆ. ಇತಿಹಾಸ ಪ್ರಸಿದ್ಧ ಮರಡಿಮಠದ ಕಾಡಸಿದ್ದೇಶ್ವರನ ಸನ್ನಿಧಿಯಲ್ಲಿ ಕಳೆದ ಹಲವು ದಶಕಗಳಿಂದ ಇದ್ದ ಶೌರ್ಯ ಎಂಬ ಕುದುರೆ ರಾತ್ರಿ ಸಮಯದಲ್ಲಿ ಊರಲ್ಲಿ ತಿರುಗಾಡಿದರೆ ಮಹಾಮಾರಿಯಂತ ರೋಗಗಳು ದೂರವಾಗುವ ನಂಬಿಕೆ ಇದೆ. ಕಳೆದ ವರ್ಷವೂ ಕೊರೊನಾ ಸಮಯದಲ್ಲಿ ಇದೇ ರೀತಿ ಮಾಡಲಾಗಿತ್ತು. ಹೀಗಾಗಿ ಕಳೆದ ವರ್ಷ ಗ್ರಾಮಗಳಲ್ಲಿ ಯಾವುದೇ ಸಾವು, ನೋವುಗಳು ಸಂಭವಿಸಿರಲಿಲ್ಲ.
ಇನ್ನು 51 ವರ್ಷಗಳ ಹಿಂದೆ ಮಲೇರಿಯಾ, ಪ್ಲೇಗ್ ನಂತಹ ಮಾರಣಾಂತಿಕ ಕಾಯಿಲೆಗಳು ಬಂದಾಗ ಇದೇ ದೇವರ ಕುದುರೆಯನ್ನು ಗ್ರಾಮದಲ್ಲಿ ತಿರುಗಾಡಲು ಬಿಟ್ಟಿದ್ದರಂತೆ. ಆಗ ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ. ಈಗ ಅದೇ ನಂಬಿಕೆ ಸ್ಥಳೀಯ ಹಿರಿಯರಿಗೆ ಇದೆ. ಇನ್ನು ಈ ವರ್ಷ ಕೊರೊನಾ ಎರಡನೇ ಅಲೆ ಹೆಚ್ಚಾದ್ದರಿಂದ ಜನರು ಮರಡಿಮಠದ ಶ್ರೀಗಳನ್ನು ಭೇಟಿ ಮಾಡಿ ಪರಿಹಾರ ಕೇಳಿದ್ದರು. ಕಳೆದ ವರ್ಷದಂತೆ ಈ ವರ್ಷವೂ ಗ್ರಾಮದಲ್ಲಿ ಮಠದ ದೈವ ಕುದುರೆಯನ್ನು ಬಿಡುವುದಾಗಿ ಶ್ರೀಗಳು ತಿಳಿಸಿದ್ದರು. ಅದರಂತೆಯೇ ಕಳೆದ ಬುಧವಾರ ರಾತ್ರಿ ಹನ್ನೆರೆಡು ಗಂಟೆಗೆ ಗ್ರಾಮದಲ್ಲಿ ಕುದುರೆಯನ್ನು ಬಿಡಲಾಗಿತ್ತು. ಆದರೆ ಇಂದು ಬೆಳಿಗ್ಗೆ ಎದ್ದು ನೋಡಿದ ಗ್ರಾಮಸ್ಥರಿಗೆ ಊಹಿಸಲಾಗದ ಚಿತ್ರಣ ಕಣ್ಣಿಗೆ ರಾಚಿದೆ.
ಹೌದು ರಾತ್ರಿ ಕಳೆದು ಬೆಳಗಾಗುವುದರೊಳಗೆ ಮರಡಿಮಠದ ಶೌರ್ಯ ಕುದುರೆ ಅಸ್ತಂಗತವಾಗಿದೆ. ದೇವರ ಕುದುರೆಯ ಅಗಲಿಕೆಯ ಸುದ್ದಿ ಕೊಣ್ಣೂರ-ಮರಡಿಮಠ ಗ್ರಾಮಸ್ಥರಲ್ಲಿ ಅರಗಿಸಿಕೊಳ್ಳಲಾಗದ ದುಖಃವನ್ನು ತಂದೊಡ್ಡಿದೆ. ಶ್ರೀಮಠದ ಶೌರ್ಯ ಕುದುರೆ ಅಗಲಿಕೆಯಿಂದ ಎರಡೂ ಗ್ರಾಮಗಳಲ್ಲಿ ಕಣ್ಣಿರಿನ ಹೊಳೆ ಹರಿದಿದ್ದು, ಭಕ್ತ ಸಮೂಹ ಕಣ್ಣಿರಲ್ಲಿ ಕೈತೊಳೆದಿದ್ದರೇ ಕೊಣ್ಣೂರ-ಮರಡಿಮಠದಲ್ಲಿ ಸೂತಕದ ಛಾಯೆ ಮನೆಮಾಡಿದೆ.