ಶಿವಮೊಗ್ಗ: 2021 ರ ಡಿಸೆಂಬರ್ನಲ್ಲಿ ತಾತನ ಮನೆಗೆ ಓದಲು ಹೋಗುತ್ತೀನಿ ಎಂದು ಹೋದವಳು ನಾಪತ್ತೆಯಾಗಿದ್ದಳು. ಆಕೆಯನ್ನು ಲಿಂಗರಾಜು ಎಂಬಾತ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾನೆ ಎಂದು ಬಾಲಕಿಯ ಪೋಷಕರು ದೂರು ನೀಡಿದ್ದರು. ಈ ಪ್ರಕರಣ 8 ತಿಂಗಳು ಕಳೆದರೂ ಇನ್ನೂ ಇತ್ಯರ್ಥ ಕಂಡಿಲ್ಲ.
ರಾಜ್ಯ ಉಚ್ಚ ನ್ಯಾಯಾಲಯ ಮೆಟ್ಟಿಲೇರಿದ ಪೋಷಕರು
ಈ ನಡುವೆ ತಮ್ಮ ಮನೆಯ ಹುಡುಗಿಯನ್ನು ಇನ್ನೂ ಹುಡುಕಿಕೊಟ್ಟಿಲ್ಲ. ಆಕೆಯನ್ನು ಹುಡುಕಿಕೊಡಿ ಎಂದು ಪೋಷಕರು ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ರು. ಅದರ ಅನ್ವಯ ವಿಚಾರಣೆ ನಡೆಸಿದ ಹೈಕೋರ್ಟ್ ಪೊಲೀಸರಿಗೆ ಅಪ್ರಾಪ್ತೆಯನ್ನು ಹುಡುಕಿಕೊಡುವಂತೆ ಖಡಕ್ ಎಚ್ಚರಿಕೆಯನ್ನು ನೀಡಿದೆ. ಹೀಗಾಗಿ, ಅಪ್ರಾಪ್ತೆಯನ್ನು ಶತಾಯಗತಾಯ ಹುಡುಕಲೇ ಬೇಕಾದ ಕೆಲಸವೊಂದು ಶಿವಮೊಗ್ಗ ಪೊಲೀಸರಿಗೆ ತಲೆನೋವು ತಂದಿಟ್ಟಿದೆ.
ಹೆಸರಿಗೆ ಪ್ರೇಮಿ, ಪೊಲೀಸರನ್ನೇ ಆಟವಾಡಿಸ್ತಿರೋ ಕಿಲಾಡಿ
ಬೆಂಗಳೂರಿನ ಕೆಪಿ ಅಗ್ರಹಾರ ಮೂಲದ ಲಿಂಗರಾಜು, ಅಪ್ರಾಪ್ತೆಯನ್ನು ಕಿಡ್ನ್ಯಾಪ್ ಮಾಡಿದ್ದಾನೆ ಎಂಬ ಪ್ರಕರಣ ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆತನನ್ನು ಹಿಡಿದು, ಅಪ್ರಾಪ್ತೆಯನ್ನು ಅವರ ಪೋಷಕರಿಗೆ ಸುಪರ್ಧಿಗೆ ಒಪ್ಪಿಸಲು ಶಿವಮೊಗ್ಗ ಪೊಲೀಸರು ನಾನಾ ಪ್ರಯತ್ನ ಮಾಡಿದ್ದಾರೆ. ಆದರೆ ಲಿಂಗರಾಜು ಪೊಲೀಸರನ್ನೆ ಆಟವಾಡಿಸ್ತಿದ್ಧಾನಂತೆ.
ಮನೆ ಮಾಲೀಕರ ಮಗಳನ್ನೇ ಕಿಡ್ನ್ಯಾಪ್ ಮಾಡಿದ್ದ
ಕೋವಿಡ್ ಟೈಂನಲ್ಲಿ ಶಿವಮೊಗ್ಗಕ್ಕೆ ಬಂದು, ಬಾಡಿಗೆಗೆ ಇದ್ದ ಮನೆಯ ಮಾಲೀಕರ ಮಗಳನ್ನೆ ಕಿಡ್ನ್ಯಾಪ್ ಮಾಡಿಕೊಂಡು ಹೋಗಿರುವ ಲಿಂಗರಾಜು, ಯಾರ ಕೈಗೂ ಸಿಗುತ್ತಿಲ್ಲವಂತೆ. ಆತನ ಫೋಟೋ ಸಮೇತ ಸುಳಿವು ಕೊಟ್ಟರೇ 50 ಸಾವಿರ ಬಹುಮಾನ ಎಂದು ಪೊಲೀಸರು ಘೋಷಿಸಿದ್ದಾರೆ. ಹಾಗಿದ್ದರೂ ಲಿಂಗರಾಜ್ನ ಸುಳಿವು ಕಾಣುತ್ತಿಲ್ಲ.
ಸ್ವಂತ ಮೊಬೈಲ್ ಬಳಸದ ಲಿಂಗರಾಜು!
ವಿಚಿತ್ರ ಅಂದರೆ, ಲಿಂಗರಾಜು, ಎಟಿಎಂನ್ನ ಬಳಸುತ್ತಿಲ್ಲವಂತೆ. ಸ್ವಂತ ಮೊಬೈಲ್ನ್ನು ಕೂಡ ಬಳಸುತ್ತಿಲ್ಲವಂತೆ. ಹುಡುಗಿಯನ್ನು ಹಾರಿಸಿಕೊಂಡು ಹೋಗುವಾಗ ಕೈಯಲ್ಲಿದ್ದ ಆರು ಲಕ್ಷದಲ್ಲಿಯೇ ಏನೋ ವ್ಯವಹಾರ ಮಾಡುತ್ತಿದ್ದಾನಂತೆ.
ಮನೆಯಲ್ಲಿ ಅಣ್ಣನಿಗೆ ಅಮ್ಮನಿಗೆ ಕರೆ
ಕೆಲ ಬಾರಿ ಕರೆ ಮಾಡಿದ್ದ ಈತ ಪೊಲೀಸರ ಕೈಗೆ ಮಾತ್ರ ಸಿಗುತ್ತಿಲ್ಲ. ಹುಡುಗಿಗೆ 18 ತುಂಬಿದ ಮೇಲೆ ನಾನು ಹೊರಜಗತ್ತಿಗೆ ಬರೋದು ಎನ್ನುತ್ತಿದ್ಧಾನೆ ಎನ್ನಲಾಗುತ್ತಿದೆ.
ಪೋಷಕರಿಗೆ ಕರೆ, ಪೊಲೀಸರಿಗೆ ಕಣ್ಣಾಮುಚ್ಚಾಲೆ
ಈ ಮಧ್ಯೆ ಪೊಲೀಸರು ಪೋಕ್ಸೋ ಕೇಸ್ನಲ್ಲಿ ಆರೋಪಿಯ ಮಾಹಿತಿ ನೀಡದ ಸಲುವಾಗಿ, ಲಿಂಗರಾಜುನ ಅಣ್ಣನನ್ನು ಸಹ ಬಂಧಿಸಿದ್ದರು. ಹೀಗಾದರೂ ಲಿಂಗರಾಜು ಪತ್ತೆಯಾಗಿಲ್ಲ. ಇನ್ನೂ ಅಪ್ರಾಪ್ತೆಯ ಪೋಷಕರಿಗೂ ಆಕೆ ಕರೆ ಮಾಡುತ್ತಿದ್ದಾಳೆ. ಆದರೆ ಆ ಸಂಖ್ಯೆಯ ಬೆನ್ನುಬಿದ್ದು ಹೋದರೆ ಪೊಲೀಸರಿಗೆ ಪ್ರಯೋಜನವಾಗುತ್ತಿಲ್ಲ. ದಾರಿಯಲ್ಲಿ ಸಿಗುವ ವ್ಯಕ್ತಿಗಳ ಬಳಿ ಫೋನ್ ಕೇಳಿ ಕರೆ ಮಾಡುತ್ತಿರುವ ಇಬ್ಬರು ಪೊಲೀಸರಿಗೆ ಮಾತ್ರ ಸಿಗುತ್ತಿಲ್ಲ.
ಈ ಕಡೆ ಶಿವಮೊಗ್ಗ ಪೊಲೀಸರಿಗೆ ಆತನನ್ನು ಹಿಡಿಯಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಪೋಷಕರು ಹೇಬಿಯಸ್ ಕಾರ್ಪಸ್ ಫೈಲ್ ಮಾಡಿ ಒತ್ತಡ ತರುತ್ತಿದ್ದಾರೆ. ಆದರೆ ಆರೋಪಿ ಲಿಂಗರಾಜು ಮಾತ್ರ ಕೈಗೆ ಸಿಗುತ್ತಿಲ್ಲ. ಬ್ಯಾಂಕ್ ಅಕೌಂಟ್, ಮೊಬೈಲ್ ಟ್ರ್ಯಾಕೀಂಗ್ ಫೇಲ್ ಆಗಿ, ಸುಳಿವು ಕೊಟ್ಟರೆ ಬಹುಮಾನ ಎಂದು ಪೊಲೀಸರು ಪೋಸ್ಟರ್ಗಳನ್ನು ವಾಟ್ಸ್ಯಾಪ್ನಲ್ಲಿ ಷೇರ್ ಮಾಡುತ್ತಿದ್ದಾರೆ. ಆದಾಗ್ಯು ಇದುವರೆಗೂ ಆತನೂ ಸಿಕ್ಕಿಲ್ಲ, ಆಕೆಯ ಸುಳಿವು ಗೊತ್ತಾಗಿಲ್ಲ. ಸದ್ಯ ಪಜೀತಿ ತಂದಿಟ್ಟಿರುವ ಪ್ರಕರಣವನ್ನು ಪೊಲೀಸರು ಹೇಗೆ ಭೇದಿಸ್ತಾರೆ ಎಂಬುದು ಕುತೂಹಲ ಮೂಡಿಸುತ್ತಿದೆ.